ಉನ್ನತ ಶಿಕ್ಷಣ ಪಡೆಯಲು ಕರೆ

ನವಲಗುಂದ,ಜೂ1 : ಪ್ರತಿಯೊಂದು ಮಗುವು ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಪಡೆಯುವುದರ ಮೂಲಕ ಸಾಧನೆ ಮಾಡಬೇಕೆಂದು ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಸರಕಾರಿ ಮಾದರಿ ಕೇಂದ್ರ ಶಾಲೆ ನಂ-3ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ಶಾಲಾ ದಾಖಲಾತಿ ಆಂದೋಲನವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಕಲಿತು ಸಾಕಷ್ಟು ಮಹನೀಯರು ಸಾಧನೆ ಮಾಡಿದ್ದು ನಮಗೆ ಪ್ರೆರಣೆಯಾಗಿದೆ, ಇವತ್ತು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣ ಮಟ್ಟದ ಶಿಕ್ಷಣ ಸಿಗುತ್ತಿದ್ದು ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವಾನಂದ ಮಲ್ಲಾಡ ಮಾತನಾಡಿ ಸರ್ಕಾರ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಉಚಿತವಾಗಿ ಪಠ್ಯ ಪುಸ್ತಕ, ಬಟ್ಟೆ, ಮಧ್ಯಾಹ್ನ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯಡಿ ಹಾಲು, ರಾಗಿ ಗಂಜಿ ಮತ್ತು ಶೂ, ಸಾಕ್ಸಗಳನ್ನು ಸಹ ನೀಡುತ್ತಿದ್ದು ಈ ಯೋಜನೆಗಳ ಕುರಿತು ಪಾಲಕರಿಗೆ ಮನವರಿಕೆ ಮಾಡಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಮುಖ್ಯ ಶಿಕ್ಷಕರಿಗೆ ಸಲಹೆ ನೀಡಿದರು.

ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಹಲವಾರು ಉಚಿತ ಸೌಲಭ್ಯಗಳ ಜೊತೆಗೆ ಉತ್ತಮ ಗುಣ ಮಟ್ಟದ ಶಿಕ್ಷಣ ದೊರೆಯುತ್ತಿದೆ, ಈ ವರ್ಷ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವುದರ ಮೂಲಕ ಸರ್ಕಾರಿ ಶಾಲೆಗಳನ್ನು ನಾವೆಲ್ಲರು ಕೂಡಿ ಬೆಳೆಸೋಣ ಎಂದರು.

ಈ ಸಂದರ್ಭದಲ್ಲಿ ವಯೋಸಹಜ ನಿವೃತ್ತಿ ಹೊಂದಿರುವ ಪ್ರಯುಕ್ತ ಸರಕಾರಿ ಮಾದರಿ ಕೇಂದ್ರ ಶಾಲೆ ನಂ-3ರ ಶಾಲೆಯ ಸಹ ಶಿಕ್ಷಕಿ ಕೆ.ಎಚ್.ಕರೆಭರಮಣ್ಣವರ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಮಾಡಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು,

ಮುಖ್ಯ ಶಿಕ್ಷಕ ಎಸ್. ಎಸ್.ಜೋಶಿ, ಕ್ಷೇತ್ರ ಸಮನ್ವಯಾಧಿಕಾರಿ ರೇಣುಕಾ ಮುರನಾಳ, ದೈಹಿಕ ಶಿಕ್ಷಣಾಧಿಕಾರಿ ಎನ್.ವಿ.ಬೀಡಿ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ಎಫ್ ನೀರಲಗಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹಿರೇಗೌಡ್ರ, ಸಹ ಶಿಕ್ಷಕರಾದ ಆರ್.ಬಿ ಹಳ್ಳಿಕೇರಿ, ಎಸ್.ಸಿ ಜಂಗಣ್ಣವರ, ಎಸ್.ಡಿ.ಎಂ.ಸಿ ಸದಸ್ಯರಾದ ಕಾಶಿಮಸಾಬ ಮಚಲಿಬಂದರ, ಮಹಮ್ಮದತಾಜುದ್ದೀನ ಹುನಗುಂದ, ರಿಯಾಜಅಹ್ಮದ ನಾಶಿಪುಡಿ, ಆಜಾದ ನಾಶಿಪುಡಿ, ಮಲ್ಲಿಕಾರ್ಜುನಸ್ವಾಮಿ ಮಠಪತಿ, ಬಿ.ಆರ್.ಪಿ ಹಾಗೂ ಸಿ.ಆರ್.ಪಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.