ಉನ್ನತ ಶಿಕ್ಷಣ, ಉದ್ಯೋಗಕ್ಕೆ ಭಾರತ ತವರಾಗಲಿ: ಸೇಡಂ ಆಶಯ

ಕಲಬುರಗಿ,ಸೆ.5-ಉನ್ನತ ಶಿಕ್ಷಣ ಮತ್ತು ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಭಾರತ ಇಡೀ ಜಗತ್ತಿನ ತವರಾಗುವಂತೆ ಮಾಡುವ ಶಕ್ತಿ ನಮ್ಮ ಶಿಕ್ಷಕರಲ್ಲಿದೆ. ಇಂದು ಅಂತಹ ಶಿಕ್ಷಕರ ಅಗತ್ಯ ದೇಶಕ್ಕಿದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಡಾ.ಬಸವರಾಜ ಪಾಟೀಲ್ ಸೇಡಂ ನುಡಿದರು.
ಸೇಡಂ ರಸ್ತೆಯ ಗೀತಾ ನಗರದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಭವ್ಯ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ ಹಾಗೂ ಸಾರ್ವಜನಿಕ ಶಿಕ್ಷಣ ವತಿಯಿಂದ
ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ತಕ್ಷಶಿಲಾ ಮತ್ತು ನಳಂದಾ ವಿಶ್ವವಿದ್ಯಾಲಯದ ಮೂಲಕ ಇಡೀ ಜಗತ್ತಿಗೆ ಅತ್ಯುತ್ತಮ ಶಿಕ್ಷಣ ನೀಡಿದ ಭಾರತ ಈಗ ಮತ್ತೊಮ್ಮೆ ಅದೇ ಹಂತಕ್ಕೆ ತಲುಪಬೇಕಿದೆ. ಆ ದಿಕ್ಕಿನಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಭಾರತಕ್ಕೆ ಯಾವತ್ತೂ ಗುರು ಸಂಪ್ರದಾಯದ ರಾಷ್ಟ್ರ ಎಂಬ ಹೆಗ್ಗುರುತಿದೆ. ಅಂತಹ ಪರಂಪರೆ ಮರುಕಳಿಸಬೇಕಾದರೆ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಾ ಅಕ್ಕ ಅವರು ಆಶೀರ್ವಚನ ನೀಡುತ್ತಾ, ಶುದ್ಧ ಪ್ರೇಮ ಮತ್ತು ಅಂತಃಕರಣ ಜಾಗೃತಗೊಳಿಸಬಲ್ಲ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ. ಹೇಗೇ ಇದ್ದರೂ ಶಿಕ್ಷಕ ಎನಿಸಿಕೊಳ್ಳಬಹುದು ಎನ್ನುವ ವಾದ ಸರಿಯಲ್ಲ. ಮೌಲ್ಯಗಳನ್ನು ಒಳಗೊಂಡ ವ್ಯಕ್ತಿ ಮಾತ್ರ ಶಿಕ್ಷಕ ಎನಿಸಿಕೊಳ್ಳುತ್ತಾನೆ ಎಂದರು.
ಕಲಬುರಗಿಯ ಎಂ.ಎಸ್.ಐ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ನರೇಂದ್ರ ಬಡಶೇಷಿ ಉಪನ್ಯಾಸ ನೀಡಿದರು.

ಉತ್ತಮ ಶಿಕ್ಷಕರಿಗೆ ಸನ್ಮಾನ
ಸಮಾರಂಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕರು ಪ್ರಶಸ್ತಿಗೆ ಭಾಜನರಾದ ಚಂದ್ರಕಲಾ ಜಗನ್ನಾಥ, ದತ್ತು ಎಸ್. ಮೇಲಕೇರಿ, ಕಸ್ತೂರಿಬಾಯಿ ಮಡಿವಾಳ, ಸಂಗೀತಾ ಜಾಂತೆ, ರವಿತೇಜ, ಶಬ್ಬೀರ್ ಅಹ್ಮದ್, ಬನ್ನಪ್ಪ ಹಣಮಂತ ಜೋಗಿ, ಲಕ್ಷ್ಮಣ ಹಣಮಂತ್ರಾಯ, ಶ್ರೀದೇವಿ ಸಾಲಿ, ಸಂಗೀತಾ, ಮಲ್ಲಿಕಾರ್ಜುನ, ಅಮೃತಾ ಶಿರವಾಳ, ಯಲ್ಲಪ್ಪ ಬಟಗೇರಾ, ವಿಜಯಕುಮಾರ್, ಶಿವರಾಜ ಗೊಂಡ ಹಾಗೂ ಪ್ರೌಢಶಾಲಾ ಶಿಕ್ಷಕರಾದ ರಾಜೇಶ್ ನಾಗೂರ, ವಾಣಿಶ್ರೀ ಚಂದ್ರಕಾಂತ, ಬಸವಂತರೆಡ್ಡಿ, ಭೀಮರಾವ್, ಅರುಣಾ ದೇಸಾಯಿ, ನಂದಕುಮಾರ್ ಆರ್. ತಗಡಪುರ ಹಾಗೂ ಪ್ರಹ್ಲಾದ್ ಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಗ್ರಾಮಾಂತರ ಶಾಸಕ ಬಸವರಾಜ ಮತ್ತಿಮೂಡ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ.ನಮೋಶಿ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ನೀರಾವರಿ ಯೋಜನೆಗಳ ವಲಯ) ಅಧ್ಯಕ್ಷ ಹರ್ಷವರ್ಧನ ಗುಗಳೆ, ಜಿಲ್ಲಾಧಿಕಾರಿ ಯಶವಂತ ಗುರುಕರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಮಹಾನಗರ ಪಾಲಿಕೆಯ ಕಮಿಷನರ್ ಪಾಟೀಲ್ ಭುವನೇಶ ದೇವಿದಾಸ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಗರಿಮಾ ಪವಾರ್,ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ, ಮೌಂಟ್ ಅಬು ರಾಷ್ಟ್ರೀಯ ಸಂಯೋಜಕ ರಾಜಯೋಗಿ ಬ್ರಹ್ಮಕುಮಾರ ಪ್ರೇಮ್ ವೇದಿಕೆಯಲ್ಲಿದ್ದರು.
ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಮಲಾಪುರ ಡಯಟ್ ಬಸವರಾಜ ನಾಯಕ್, ಕಲಬುರಗಿ ಉತ್ತರ ಕ್ಷೇತ್ರದ ಬಿಇಒ ವೀರಣ್ಣ ಬೊಮ್ನಳ್ಳಿ, ಕಲಬುರಗಿ ದಕ್ಷಿಣ ಕ್ಷೇತ್ರದ ಬಿಇಒ ಶಂಕರಮ್ಮ ಡವಳಗಿ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್ ಹೂಗಾರ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ್, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ (ಸರ್ಕಾರಿ ಪ್ರೌಢಶಾಲಾ ಗ್ರೇಡ್-1) ಅಧ್ಯಕ್ಷ ರಾಜು ದೊಡ್ಮನಿ ಸೇರಿದಂತೆ ಜಿಲ್ಲೆಯ ವಿವಿಧ ಸರಕಾರಿ ಶಾಲೆಗಳ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಾನವೀಯ ಪ್ರೀತಿ ಬೆಲೆ ಬಾಳುವಂಥದ್ದು
ಸುಖ ಎನ್ನುವುದು ಭವ್ಯವಾದ ಬಂಗಲೆ ಮತ್ತು ಟಿ.ವಿ. ಇತ್ಯಾದಿ ಭೋಗ ವಸ್ತುಗಳಲ್ಲಿ ಇಲ್ಲ. ನಮ್ಮಲ್ಲಿರುವ ಅಂತಃಕರಣ ಮತ್ತು ಮಾನವೀಯ ಪ್ರೀತಿಯನ್ನು ನಾವು ಮತ್ತೊಬ್ಬರಿಗೆ ತೋರುವ ಗುಣವನ್ನು ಅಳವಡಿಸಿಕೊಂಡಾಗ ಮಾತ್ರ ಬದುಕಿಗೆ ನೈಜ ಅರ್ಥ ಬರುತ್ತದೆ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಹಿರಿಯ ಮುತ್ಸದ್ಧಿ ಬಸವರಾಜ ಪಾಟೀಲ್ ಸೇಡಂ ಕಿವಿಮಾತು ಹೇಳಿದರು.
ಶಿಕ್ಷಕರಲ್ಲಿ ಬಹುಮುಖ್ಯವಾಗಿ ಮಾನವೀಯ ಪ್ರೀತಿ ಇರಬೇಕು. ಮಕ್ಕಳನ್ನು ಎತ್ತರಕ್ಕೆ ಕೊಂಡೊಯ್ಯುವ ಶಿಕ್ಷಣ ನೀಡುವ ಹೊಣೆಗಾರಿಕೆ ಇರುವ ಶಿಕ್ಷಕರಿಗೆ ಮಾನವೀಯ ಪ್ರೀತಿಯೇ ಪ್ರಧಾನ ಮಾನದಂಡ ಆಗಬೇಕು ಎಂದರು.