ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ


ಗದಗ, ಜ. 4 : ಮಕ್ಕಳಿಗೆ ಉತ್ಕøಷ್ಠ ಶಿಕ್ಷಣ ನೀಡಿ ಅವರನ್ನು ವಿದ್ಯೆಯ ಆಸ್ತಿಯನ್ನಾಗಿ ಮಾಡಿ. ಈ ಶಿಕ್ಷಣದಿಂದ ಅವರ ಜೀವನ ಉಜ್ವಲವಾಗುವದು, ಅವರ ಕುಟುಂಬ ಉನ್ನತಕ್ಕೇರುವದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಪಾಲಕರಿಗೆ ಕರೆ ನೀಡಿದರು.
ಅವರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ಬೆಂಗಳೂರು, ಗದಗ ಜಿಲ್ಲಾ ಘಟಕ ಎರ್ಪಡಿಸಿದ್ದ ವೀರಶೈವ ಲಿಂಗಾಯತ ಪ್ರತಿಭಾನ್ವಿತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ, ಕಾರ್ಯಕಾರಿ ಮಂಡಳಿ ಸೇವಾ ಕಾರ್ಯ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಮಾಜಿ ಸಚಿವ, ಸಮಾಜದ ಹಿರಿಯರಾದ ಎಸ್.ಎಸ್.ಪಾಟೀಲ ಮಾತನಾಡಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಬಂದವರಲ್ಲಿ ವೀರಶೈವ ಲಿಂಗಾಯತರೇ ಹೆಚ್ಚು. ವೀರಶೈವ ಲಿಂಗಾಯತರು ಸ್ಥಾಪಿಸಿದ ಇಂಜನೀಯರಿಂಗ್, ಮೆಡಿಕಲ್ ಕಾಲೇಜುಗಳೇ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ ಈ ಕಾಲೇಜುಗಳಲ್ಲಿ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ ವಿದ್ಯಾರ್ಥಿನಿಗೆ ಉಚಿತ ಪ್ರವೇಶ ನೀಡಬೇಕು. ಈ ಭಾಗದಲ್ಲಿ ನಮ್ಮ ಸಮಾಜದ ವಿದ್ಯಾರ್ಥಿಗಳಿಗಾಗಿ ಹಾಸ್ಟೇಲ್ ನಿರ್ಮಾಣಗೊಳ್ಳಬೇಕು ಅದಕ್ಕಾಗಿ ಸಮಾಜಬಾಂಧವರು ಮುಂದಾದಲ್ಲಿ ನಾನೂ ಕೈ ಜೋಡಿಸುವೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ವಿ.ಪ ಸದಸ್ಯ ಎಸ್.ವ್ಹಿ.ಸಂಕನೂರ ಮಾತನಾಡಿ ಸ್ಪಧಾತ್ಮಕತೆಯ ಇಂದಿನ ದಿನಗಳಲ್ಲಿ ಮೆರಿಟ್‍ಗೆ ಹೆಚ್ಚಿನ ಅವಕಾಶಗಳಿವೆ ಆದ್ದರಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರಿಶ್ರಮಪಟ್ಟು ಅಭ್ಯಾಸ ಮಾಡಬೇಕಿದೆ. ಕೀಳರಿಮೆ ಬೇಡ, ಬಡತನ ಮತ್ತು ಜಾತಿ ಸಾಧನೆಗೆ ಅಡ್ಡಿ ಆಗದು ಎಂದರು.