ಉದ್ರಿಕ್ತರ ಆಕ್ರೋಶಕ್ಕೆ ಜೆಸ್ಕಾಂ ಶಾಖಾಧಿಕಾರಿ ತಲೆದಂಡ ಲೈನ್ ಮ್ಯಾನ್ ಸಾವು: ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ

ಅಫಜಲಪುರ: ಜು.1:ವಿದ್ಯುತ್ ತಂತಿ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಶುಕ್ರವಾರದಂದು ತಾಲೂಕಿನ ಬಟಗೇರಿ ಗ್ರಾಮದಲ್ಲಿ ನಡೆದಿದೆ.

ಲೈನ್ ಮ್ಯಾನ್ ಸಂತೋಷ ಗುಜ್ಜಾ(29) ಜೇವರ್ಗಿ ತಾಲೂಕಿನ ಹುಲ್ಲೂರು ಗ್ರಾಮದ ಮೃತ ದುರ್ದೈವಿ. ಇವರು ಚವಡಾಪುರ ಜೆಸ್ಕಾಂ ಉಪ ವಿಭಾಗದ ವ್ಯಾಪ್ತಿಗೆ ಒಳಪಡುವ ಬಟಗೇರಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಟಿಸಿ ಕಂಬದ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ದುರ್ಘಟನೆ ನಡೆದ ತಕ್ಷಣ ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ಪಕ್ಕದ ಚವಡಾಪುರ ರಾಜ್ಯ ಹೆದ್ದಾರಿ ತಡೆದು ಟೈರ್ ಗೆ ಬೆಂಕಿ ಹಚ್ಚಿ ಸುಮಾರು 3 ಗಂಟೆಗೂ ಅಧಿಕ ಕಾಲ ಪ್ರತಿಭಟಿಸಿದರು.

ಲೈನ್ ಮ್ಯಾನ್ ವಿದ್ಯುತ್ ಕಂಬ ಹತ್ತುವ ಮೊದಲು ಸ್ಥಳೀಯ ಕಚೇರಿಗೆ ಮಾಹಿತಿ ನೀಡಿ ಟಿಸಿ ರಿಪೇರಿ ಮಾಡುವ ಹಿನ್ನೆಲೆ ಅರ್ಧ ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಿ ಎಂದು ಹೇಳಿ ವಿದ್ಯುತ್ ಕಂಬ ಏರಿದ ಮೇಲೆ ವಿದ್ಯುತ್ ಏಕೆ ಹಾಕಿದ್ದಾರೆ. ಈ ಹೀನ ಕೃತ್ಯದಲ್ಲಿ ಕೈವಾಡವಿದೆ, ಕೊಲೆ ಮಾಡುವ ಉದ್ದೇಶದಿಂದಲೇ ಪರವಾನಿಗೆ ತೆಗೆದುಕೊಂಡರು ವಿದ್ಯುತ್ ಹಾಕಿದ್ದಾರೆ.

ಹೀಗಾಗಿ ಈ ಪ್ರಕರಣವನ್ನು ಸೂಕ್ತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಕುಟುಂಬಸ್ಥರಿಗೆ ಸರಕಾರದಿಂದ 1 ಕೋಟಿ ರೂ.ಪರಿಹಾರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಸ್ಥಳಕ್ಕೆ ಜೆಸ್ಕಾಂ ಎಂ.ಡಿ ಬರಬೇಕು ಎಂದು ಪಟ್ಟು ಹಿಡಿದು ಕುಳಿತರು. ಇದರಿಂದಾಗಿ ಹೆದ್ದಾರಿ ಮೇಲೆ ಸುಮಾರು 2 ಕಿ.ಮೀವರೆಗೆ ರಸ್ತೆ ಟ್ರಾಫಿಕ್ ಜಾಮ್ ಹಿನ್ನೆಲೆ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಅನುಭವಿಸುವಂತಾಯಿತು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ವೈ.ಪಾಟೀಲ್ ಮಾತನಾಡಿ, ಈ ದುರ್ಘಟನೆ ನಡೆದಿದ್ದು ನನಗೆ ಅತ್ಯಂತ ನೋವು ತಂದಿದೆ. ಜುಲೈ 3ರಂದು ನಡೆಯುವ ವಿಧಾನಸಭೆಯ ಅಧಿವೇಶನದಲ್ಲಿ ಚರ್ಚೆ ಮಾಡಿ ಹೆಚ್ಚಿನ ಪರಿಹಾರವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಈ ದುರ್ಘಟನೆ ನಡೆಯಲು ಕಾರಣಿಕರ್ತರಾದ ಜೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ತಕ್ಷಣ ಹುದ್ದೆಯಿಂದ ಅಮಾನತ್ತುಗೊಳಿಸಲು ಮೇಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನನ್ನ ಕಡೆಯಿಂದ ವೈಯಕ್ತಿಕವಾಗಿ 1 ಲಕ್ಷ ರೂ. ಆರ್ಥಿಕ ನೆರವು ನೀಡುತ್ತೇನೆಂದು ಭರವಸೆ ನೀಡಿದರು.

ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್ ಮಾತನಾಡಿ, ಬಡ ರೈತರ ಜಮೀನಿನಲ್ಲಿದ್ದ ಟಿಸಿ ರಿಪೇರಿ ಮಾಡುವಾಗ ಈ ದುರ್ಘಟನೆ ನಡೆದಿದೆ. ಇದಕ್ಕೆ ನೇರವಾಗಿ ಅಧಿಕಾರಿಗಳ ಬೇಜವಾಬ್ದಾರಿ ಕಾರಣವಾಗಿದೆ. ಇಲ್ಲಿನ ಶಾಖಾಧಿಕಾರಿ ವಿರುದ್ಧ ಹಲವು ಆರೋಪಗಳು ಮತ್ತು ದೂರುಗಳು ಕೇಳಿ ಬಂದಿದ್ದರು ಕೂಡ ಅವರನ್ನು ವರ್ಗಾವಣೆ ಮಾಡಲು ಮೇಲಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ತಕ್ಷಣ ಶಾಖಾಧಿಕಾರಿಯನ್ನು ಅಮಾನತ್ತು ಮಾಡಿ ಕಾನೂನು ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಕುಟುಂಬಸ್ಥರಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

ಜೆಸ್ಕಾಂ ಮುಖ್ಯ ಅಭಿಯಂತರರಾದ ಆರ್.ಡಿ.ಚಂದ್ರಶೇಖರ್ ಮಾತನಾಡಿ, ವಿದ್ಯುತ್ ತಗಲಿ ನಮ್ಮ ಇಲಾಖೆಯ ಸಿಬ್ಬಂದಿ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಶಾಖಾಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಮೂಲ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು ಹೀಗಾಗಿ ತಕ್ಷಣ ಅವರನ್ನು ಅಮಾನತು ಮಾಡಲಾಗುವುದು.ಅಲ್ಲದೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತವಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಾಗುವುದು. ಶೀಘ್ರದಲ್ಲಿ ಸರಕಾರದಿಂದ ಬರುವ ಪರಿಹಾರವನ್ನು ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದಾಗ ಪ್ರತಿಭಟನಾಕಾರರು ಪ್ರತಿಭಟನೆಯನ್ನು ವಾಪಸ್ ಪಡೆದರು.

ಈ ಸಂದರ್ಭದಲ್ಲಿ ಆಳಂದ ಶಾಸಕ ಬಿ.ಆರ್.ಪಾಟೀಲ್, ಜೇವರ್ಗಿ ಹಿರಿಯ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್, ಸಹಾಯಕ ಆಯುಕ್ತೆ ಮಮತಾ ಕುಮಾರಿ, ತಹಶೀಲ್ದಾರ್ ಸಂಜೀವಕುಮಾರ ದಾಸರ ಸೇರಿದಂತೆ ಡಿವೈಎಸ್ಪಿ ಗೋಪಿ ಆರ್.ಬಿ, ಸಿಪಿಐ ರಾಜಶೇಖರ್ ಬಡದೇಸಾರ, ಸಿಪಿಐ ಬಾಸು ಚೌವ್ಹಾಣ್, ಪಿಎ??? ಗಳಾದ ಭೀಮಾರಾಯ ಬಂಕ್ಲಿ, ರಾಜಶೇಖರ್ ರಾಠೋಡ, ಗಂಗಮ್ಮ ಪ್ರತಿಭಟನೆಯಲ್ಲಿ ಸೂಕ್ತ ಕಟ್ಟೆಚ್ಚರ ವಹಿಸಿದರು.


ಶಾಖಾಧಿಕಾರಿ ಸಸ್ಪೆಂಡ್

ಸದರಿ ಘಟನೆಯ ಹಿನ್ನಲೆ ಚವಡಾಪುರ ಜೆಸ್ಕಾಂ ಶಾಖಾಧಿಕಾರಿ ಚಂದ್ರಶೇಖರ ಬರಡಿ ಅವರನ್ನು ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆ ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದ್ದು ಚವಡಾಪುರ ಶಾಖೆಗೆ ತಾತ್ಕಾಲಿಕವಾಗಿ ಗೊಬ್ಬೂರ ಶಾಖಾಧಿಕಾರಿ ಸತ್ಯನಾರಾಯಣ ಅವರನ್ನು ಮುಂದಿನ ಆದೇಶದವರೆಗೆ ಹೆಚ್ಚುವರಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ.