ಉದ್ಯೋಗ ಹೆಸರಲ್ಲಿ ವಂಚನೆ ಇಬ್ಬರ ಬಂಧನ

ಬೆಂಗಳೂರು,ಫೆ.೬-ಬಿಬಿಎಂಪಿ ವತಿಯಿಂದ ಸಬ್ಸಿಡಿ ದರದಲ್ಲಿ ಕಾರಿನ ಲೋನ್, ನಿವೇಶನ ಕೆಲಸ, ವಿಧೆವೆಯವರ ಮಾಶಾಸನ ಮಾಡಿಸಿ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ಗ್ಯಾಂಗ್ ಪತ್ತೆಹಚ್ಚಿರುವ ಉತ್ತರ ವಿಭಾಗದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀನಗರದ ಕಾಳಿದಾಸ ಲೇಔಟ್ ದೀಪಕ್ ಅಲಿಯಾಸ್ ಕಿರಣ್(೨೨)ವಿದ್ಯಾರಣ್ಯಪುರದ ಕಾವೇರಿ ಬಡಾವಣೆಯ ಹರ್ಷಾ ಅಲಿಯಾಸ್ ಜಗದೀಶ್ (೨೧)ಬಂಧಿತ ಆರೋಪಿಗಳಾಗಿದ್ದು,
ಗ್ಯಾಂಗ್ ನಲ್ಲಿದ್ದು ತಲೆಮರೆಸಿಕೊಂಡಿರುವ ಭಾವನ,ಭಾವನಿ ಹಾಗೂ ಸಂಜಯ್ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಅ. ೩೧ ರಂದು ಮೊಬೈಲ್ ನಿಂದ ಕರೆ ಮಾಡಿ ಬಿಬಿಎಂಪಿ. ಕೇಂದ್ರ ಕಚೇರಿಯಲ್ಲಿ ಕಂಪ್ಯೂಟರ್ ಅಪರೇಟರ್ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರಿಂದ ೮ ಸಾವಿರ ರೂಗಳನ್ನು ಆನ್‌ಲೈನ್‌ನಲ್ಲಿ ವರ್ಗಾಣೆ ಮಾಡಿಸಿಕೊಂಡು ಯಾವುದೇ ಕೆಲಸ ಕೊಡಿಸದೇ ಮೋಸ ಮಾಡಿರುವುದಾಗಿ ನೀಡಿದ ದೂರಿನ ಸಂಬಂಧ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಟಿ ಆಕ್ಟ್, ವಂಚನೆ ಪ್ರಕರಣ ದಾಖಲಾಗಿರುತ್ತು.
ಈ ಪ್ರಕರಣದಲ್ಲಿ ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ಕೈಗೊಂಡು ಗ್ಯಾಂಗ್ ನ ಇಬ್ಬರನ್ನು ಬಂಧಿಸಿ ೨ ಮೊಬೈಲ್ ಗಳು, ೨ ಸಾವಿರ ನಗದನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಆರೋಪಿಗಳು ವಿಚಾರಣೆಯಲ್ಲಿ ವಿಧವೆಯರು, ಗೃಹಿಣಿಯರನ್ನು ಗುರಿಯಾಗಿಸಿಕೊಂಡು ಮೊಬೈಲ್‌ನಿಂದ ಕರೆ ಮಾಡಿ ವಿಧವಾ ವೇತನ. ಯುವಕರಿಗೆ ಬಿಬಿಎಂಪಿ ಕಛೇರಿಯಲ್ಲಿ ಕಂಪ್ಯೂಟರ್ ಅಪರೇಟರ್ ಕೆಲಸ, ಸಬ್ಸಿಡಿ ದರದಲ್ಲಿ ಕಾರು, ನಿವೇಶನ ಕೊಡಿಸುತ್ತೇವೆಂದು ವಂಚಿಸಿ, ಅವರುಗಳಿಂದ ಹಣ ವರ್ಗಾವಣೆ ಮಾಡಿಸಿಕೊಂಡು ಮೋಜಿನ ಜೀವನ ನಡೆಸುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ.
ಆರೋಪಿಗಳು ಸುಮಾರು ೬೦ ಕ್ಕೂ ಹೆಚ್ಚು ಮಂದಿಗೆ ವಂಚಿಸಿ ಸುಮಾರು ೧೫ ಲಕ್ಷಕ್ಕೂ ಹೆಚ್ಚು ಹಣವನ್ನು ಮೋಸ ಮಾಡಿ ವರ್ಗಾಯಿಸಿಕೊಂಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಆದರೆ ಸಾರ್ವಜನಿಕರು ಯಾರೂ ಈ ಬಗ್ಗೆ ಪ್ರಕರಣ ದಾಖಲಿಸಿರುವುದಿಲ್ಲ ಎಂದು ಹೇಳಿದರು.
ಈ ಪ್ರಕರಣವನ್ನು ಡಿಸಿಪಿ ಸೈದುಲು ಅಡಾವತ್ ನೇತೃತ್ವದ ಇನ್ಸ್‌ಪೆಕ್ಟರ್ ಶಿವರತ್ನ ಮತ್ತವರ ಸಿಬ್ಬಂದಿ ಗ್ಯಾಂಗ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.