ಉದ್ಯೋಗ ರಥ ಮೂಲಕ ದುಡಿಯೋಣ ಬಾ ಅಭಿಯಾನದ ಪ್ರಚಾರ

ಹುಲಸೂರ: ಎ.25:ತಾಲ್ಲೂಕಿನ ಗಡಿಗೌಡಗಾಂವ ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ ದುಡಿಯೋಣ ಬಾ ಅಭಿಯಾನ ಕುರಿತು ಪ್ರಚಾರ ಮಾಡಲಾಯಿತು.

ಹುಲಸೂರ ತಾಲ್ಲೂಕು ಪಂಚಾಯತಿಯ ಐಇಸಿ ತಂಡ ಗ್ರಾಮಕ್ಕೆ ತೆರಳಿ ಧ್ವನಿವರ್ಧಕ ಅಳವಡಿಸಿದ ಉದ್ಯೋಗ ರಥ (ಆಟೋ) ಮೂಲಕ ಪ್ರಚಾರ ಕಾರ್ಯ ಕೈಗೊಂಡಿತು. ಅಭಿಯಾನದಡಿ ಗ್ರಾಮಸ್ಥರು ಹಾಗೂ ರೈತರು ಕೈಗೆತ್ತಿಕೊಳ್ಳಬಹುದಾದ ವಿವಿಧ ಕಾಮಗಾರಿಗಳು ಹಾಗೂ ಯೋಜನೆಗಳ ಮಾಹಿತಿವುಳ್ಳ ಕರಪತ್ರಗಳನ್ನು ತಾಲ್ಲೂಕು ಐಇಸಿ ಸಂಯೋಜಕ ಗಣಪತಿ ಬಿ. ಹರಕೂಡೆ ಅವರು ಮನೆಮನೆಗೆ ಭೇಟಿ ನೀಡಿ ಹಂಚಿದರು. ಎಸ್‍ಸಿ ಹಾಗೂ ವಿವಿಧ ಬಡಾವಣೆಗಳಲ್ಲಿ ಅಭಿಯಾನ ಕುರಿತು ಜನರಲ್ಲಿ ಅರಿವು ಮೂಡಿಸಿ ಅಭಿಯಾನದಲ್ಲಿ ಕೂಲಿಕಾರ್ಮಿಕರು ಹಾಗೂ ರೈತರು ಪಾಲ್ಗೊಳ್ಳುವುದರಿಂದ ಆಗುವ ಲಾಭಗಳ ಕುರಿತು ತಿಳಿ ಹೇಳಿದರು.

ಗಡಿಗೌಡಗಾಂವ ಗ್ರಾಪಂ ಪಿಡಿಒ ಬಸವರಾಜ ಸಂಕಗೊಂಡ ಅವರು ಮಾತನಾಡಿ, ರೈತರು ಹಾಗೂ ಗ್ರಾಮಸ್ಥರು ಈ ಅಭಿಯಾನದಲ್ಲಿ ಪಾಲ್ಗೊಂಡು ತಮಗೆ ಬೇಕಾಗುವ ಯೋಜನೆಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕು. ಗ್ರಾಮ ಜೀವನ ಮಟ್ಟ ಸುಧಾರಣೆಗೆ ಗ್ರಾಪಂ ಬದ್ಧವಾಗಿದೆ ಎಂದರು. ಗ್ರಾಪಂ ಸಿಬ್ಬಂದಿ, ಮೇಟಿಗಳಾದ ಅಲದಫ್ ಹುಸೇನ್ ಮುಲ್ಲಾ, ದಿಗಂಬರ ಶಾಸ್ತ್ರಿ ಹಾಗೂ ನರೇಗಾ ಕೂಲಿಕಾರ್ಮಿಕರು ಈ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.