ಉದ್ಯೋಗ ಪಡೆಯುವಲ್ಲಿ ಸಂವಹನ ಕೌಶಲ್ಯ ಮುಖ್ಯ

ವಿಜಯಪುರ:ಜೂ.11: ಇಂದಿನ ದಿನಮಾನದಲ್ಲಿ ಬಹುಭಾಷೆಗಳ ಜ್ಞಾನ, ಸಂವಹನ ಕೌಶಲ್ಯಗಳು ಅದರಲ್ಲೂ ಇಂಗ್ಲೀಷ್ ಭಾಷೆಯ ಜ್ಞಾನವು ಉದ್ಯೋಗ ಪಡೆಯುವಲ್ಲಿ ಬಹುಮುಖ್ಯವಾಗಿದೆ ಎಂದು ಮಹಿಳಾ ವಿವಿಯ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ವಿಷ್ಣು ಎಂ. ಶಿಂದೆ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಹಾಗೂ ಉನ್ನತಿ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಒಂದು ತಿಂಗಳ “ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ ಇಂಗ್ಲೀಷ್ ಸಂವಹನ”ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೇ ಭಾಷೆಯನ್ನು ಕಲಿಯುವಾಗ ಕೇಳುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದರಲ್ಲಿ ಪರಿಣಿತಿಯನ್ನು ಹೊಂದಬೇಕು. ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಇಂತಹ ಅನೇಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿನಿಯರು ಸ್ವಯಂಪ್ರೇರಿತರಾಗಿ ಭಾಗವಹಿಸಿ ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಸಿಗುವ ಯಾವುದೇ ಅವಕಾಶಗಳನ್ನು ಕಳೆದುಕೊಳ್ಳಬಾರದು ಎಂದು ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.
ಸಮಾರಂಭದಲ್ಲಿ ವಿವಿಯ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಮಾತನಾಡಿ, ಉತ್ತಮ ಭಾಷಾ ನಿರ್ವಹಣಾ ಕೌಶಲ್ಯ ಹಾಗೂ ಸಂವಹನ ಕೌಶಲ್ಯಗಳಿಂದ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಉನ್ನತಿ ಫೌಂಡೇಶನ್‍ನ ಶಿಬಿರ ತರಬೇತುದಾರ ಮಧು ಹುಬ್ಬಳ್ಳಿ, ವಿವಿಯ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಅಶ್ವಿನಿ ಕೆ.ಎನ್ ಹಾಗೂ ವಿವಿಯ ಮುಖ್ಯ ನಿಲಯಪಾಲಕಿ ಡಾ. ಜ್ಯೋತಿ ಉಪಾಧ್ಯೆ, ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತ್ತಕೋತ್ತರ ವಿದ್ಯಾರ್ಥಿನಿಯರು, ಬೋಧಕೇತರ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಗಲಾ ಹಿರೇಮಠ ಕಾರ್ಯಕ್ರಮವನ್ನು ನಿರೂಪಿಸಿದರು.