ಉದ್ಯೋಗ ಖಾತ್ರಿ ವೇತನ ಬಾಕಿ ಪಾವತಿಗೆ ಆಗ್ರಹಿಸಿ ಜಿಪಂ ಮುಂದೆ ಧರಣಿ

ಕಲಬುರಗಿ: ಮೇ.18: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರು ಕೆಲಸ ಮಾಡಿದ ಐದರಿಂದ ಏಳು ವಾರಗಳ ಕೂಲಿ ಕೆಲಸ ಮಾಡಿ ತಿಂಗಳುಗಂಟಲೇ ಕಳೆದರೂ ಕೂಲಿಕಾರರ ಬಾಕಿ ವೇತನ ಕೂಡಲೇ ಪಾವತಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗುರುವಾರ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಕೂಲಿಕಾರರು ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಬೃಹತ್ ಧರಣಿ ಸತ್ಯಾಗ್ರಹ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮನರೇಗಾ ಯೋಜನೆ ಹಾಗೂ ಪಂಚಾಯಿತಿರಾಜ್ ಇಲಾಖೆಯ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿ, ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಅದ್ದರಿಂದ ದಿನಕ್ಕೆ ಒಂದು ಸಲ ಎನ್‍ಎಂಎಂಎಸ್ ಮಾಡಬೇಕು ಎಂದು ಒತ್ತಾಯಿಸಿದರು.
ಬೇಸಿಗೆ ಬಿಸಿಲಿನ ತಾಪ ಹೆಚ್ಚಳವಾಗುತ್ತಿದೆ. ಆದ್ದರಿಂದ ಕೆಲಸದ ಪ್ರಮಾಣವನ್ನೂ ಸಹ ಕಡಿಮೆ ಮಾಡಬೇಕು. ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಕೂಲಿಕಾರರ ಫಾರಂ ನಂಬರ್ 6ಎ ಕೊಡಲು ಹೋದರೆ ಅಭಿವೃದ್ಧಿ ಅಧಿಕಾರಿಗಳು ಇರುವುದಿಲ್ಲ. ಕಾರಣ ವಲಸೆ ಹೋಗುವುದನ್ನು ತಪ್ಪಿಸಲು ತುರ್ತಾಗಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ಸ್ಥಳದಲ್ಲಿ ನೆರಳಿನ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ, ಕೆಲಸ ಮಾಡುವ ಸಾಮಗ್ರಿಗಳ ಶುದ್ಧೀಕರಣಗೊಳಿಸಲು ವಾರಕ್ಕೊಂದು ಸಲ ಹಣ ಕೊಡುವಂತೆ, ನಕಲಿ ಕೂಲಿಕಾರರ ಹೆಸರಿನಲ್ಲಿ ಹಣ ಎತ್ತಿ ಹಾಕುತ್ತಿರುವ ಅಧಿಕಾರಿಗಳ ಮತ್ತು ಚುನಾಯಿತ ಪ್ರತಿನಿಧಿಗಳ ಮೇಲೆ ಕಠಿಣ ಕ್ರಮ ಜರುಗಿಸುವಂತೆ, ಈ ಹಿಂದೆ ಕಡಿತಗೊಂಡ ಜಾಬ್ ಕಾರ್ಡ್‍ಗಳನ್ನು ಹೊಸದಾಗಿ ಮಾಡಿಕೊಡುವಂತೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರದೇ ಇದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭೀಮಶೆಟ್ಟಿ ಯಂಪಳ್ಳಿ, ಮೇಘರಾಜ್ ಕಠಾರೆ, ಡಾ. ಸಾಯಬಣ್ಣ ಗುಡುಬಾ, ಸುಭಾಷ್ ಹೊಸಮನಿ, ಸಿದ್ಧರಾಮ್ ಅಧಾನಿ, ರಾಯಪ್ಪ ಹುರಮುಂಜಿ, ದಿಲೀಪಕುಮಾರ್, ಮಲ್ಲಮ್ಮ ಕೋಡ್ಲಿ, ಕಾಶಿನಾಥ್ ಬಂಡಿ, ಗುರು ಕೋಣಿನ್, ಬಸಪ್ಪ ಕೋಳಕೂರ್, ಚಂದಪ್ಪ ಹಾವನೂರ್, ಶೇಕಮ್ಮ ಇಂಗಳಗಿ ಮುಂತಾದವರು ಪಾಲ್ಗೊಂಡಿದ್ದರು.