ಉದ್ಯೋಗ ಖಾತ್ರಿ ರೋಜಗಾರ ದಿನಾಚರಣೆ

ಕಲಬುರಗಿ,ಜ.6-ಜಿಲ್ಲೆಯ ಅಫಜಲಪುರ ತಾಲೂಕು ಪಂಚಾಯತ, ಘತ್ತರಗಾ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜಗಾರ ದಿನಾಚರಣೆ ಮಾಡಲಾಯಿತು.
ಈ ವೇಳೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ನಬಿ ಮಾತನಾಡಿ, ಗ್ರಾಮೀಣ ಬಡಜನರ ಜೀವನೋಪಾಯದ ಮಟ್ಟವನ್ನು ಸುಧಾರಿಸುವುದು. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಗುರಿಯಾಗಿದೆ. ಆ ನಿಟ್ಟಿನಲ್ಲಿ ಪ್ರತಿ ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ ಕನಿಷ್ಠ 150 ದಿನಗಳ ಉದ್ಯೋಗವನ್ನು ನೀಡಿ ಅವರ ಜೀವನಕ್ಕೆ ಭದ್ರತೆ ಒದಗಿಸಲಾಗುತ್ತಿದೆ ಎಂದರು.
ಪ್ರತಿ ಕುಟುಂಬವು ಉದ್ಯೋಗ ಚೀಟಿ ಪಡೆದುಕೊಂಡು ಉದ್ಯೋಗ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲಾ ವಯಸ್ಕರು, ಅಕುಶಲ ದೈಹಿಕ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ. ಮಹಿಳೆಯರಿಗೆ, ಪುರುಷರಿಗೆ ಸಮಾನ ಕೂಲಿ, ಕೆಲಸಕ್ಕೆ ಬೇಡಿಕೆ ಸಲ್ಲಿಸಿದ ಹದಿನೈದು ದಿನದೊಳಗೆ ಉದ್ಯೋಗ ನೀಡಿದ್ದಲ್ಲಿ ನಿರುದ್ಯೋಗ ಭತ್ಯೆಗೆ ಅವಕಾಶವಿರುತ್ತದೆ. ವಾರಾಂತ್ಯದಲ್ಲಿ ಕೂಲಿಯನ್ನು ಪಾವತಿಸಬೇಕು. ತಪ್ಪಿದ್ದಲ್ಲಿ ಕೂಲಿ ವಿಳಂಬ ಪರಿಹಾರ ಭತ್ಯೆ ಪಡೆದುಕೊಳ್ಳುವ ಅವಕಾಶವಿದೆ. ಕೂಲಿ ಹಣ ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದರು.
ವೈಯಕ್ತಿಕ ಕಾಮಗಾರಿಗಳು: ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಕೃಷಿ ಅರಣ್ಯ ಕಾಮಗಾರಿಗಳು, ಕೃಷಿ ಹೊಂಡ, ಇಂಗು ಗುಂಡಿ, ಕೊಳುವೆ ಬಾವಿ, ಭೂ ಅಭಿವೃದ್ಧಿ, ಗ್ರಾಮೀಣ ಗೋದಾಮು, ಜಮೀನು ಸುತ್ತಲು ತೋಟಗಾರಿಕಾ ಸಸಿಗಳ ನಡುವುದು ಸೇರಿದಂತೆ ಅನೇಕ ಕಾಮಗಾರಿಗಳನ್ನು ಬಳಕೆ ಮಾಡಿಕೊಳ್ಳಬಹುದು.
ಸಮುದಾಯ ಕಾಮಗಾರಿಗಳು: ಕೆರೆ ಹೂಳೆತ್ತುವುದು, ಗೋ ಕಟ್ಟೆ ನಿರ್ಮಾಣ, ಹೊಸ ಕೆರೆ ನಿರ್ಮಾಣ, ನೆರೆ ಹಾವಳಿ ತಡೆಗಟ್ಟುವಿಕೆ ಕಾಮಗಾರಿಗಳು, ಸರಕಾರಿ ಶಾಲೆಗಳ ಆಟದ ಮೈದಾನ ಅಭಿವೃದ್ಧಿ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ, ಅಂಗನವಾಡಿ ಕಟ್ಟಡಗಳು ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೊಳ್ಳುಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಐಇಸಿ ಕೊಡಿನೇಟರ್, ಉದ್ಯೋಗ ಚೀಟಿ ಪಡೆದ ಕೂಲಿ ಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸಂಘದ ಮಹಿಳೆಯರು ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಗವಂತರಾಯ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಇನ್ನಿತರರು ಉಪಸ್ಥಿತರಿದ್ದರು.