ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಂತ್ರಗಳ ಬಳಕೆ: ಆರೋಪ

ದೇವದುರ್ಗ.ನ.೧೦-ತಾಲೂಕಿನ ದೊಂಡಂಬಳಿ ಗ್ರಾಪಂ ವ್ಯಾಪ್ತಿಯ ಮೇದರಗೋಳ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಯಂತ್ರಗಳನ್ನು ಬಳಸಿ ಕೆಲಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮೀಣ ಭಾಗದ ಕೂಲಿಕಾರರ ಗುಳೆ ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದ್ದು, ಜನರಿಗೆ ಕೆಲಸ ನೀಡುವುದು ಇದರ ಉದ್ದೇಶ. ಆದರೆ, ಮೇದರಗೋಳ ಗ್ರಾಮದಲ್ಲಿ ಸರ್ಕಾರಿ ಶಾಲೆ ಆವರಣದಲ್ಲಿ ಮರಳು ಹಾಕಿ, ಸಮತಟ್ಟು ಮಾಡುವ ಹಾಗೂ ಸ್ವಚ್ಛತೆ ಕೆಲಸದಲ್ಲಿ ಟ್ರ್ಯಾಕ್ಟರ್ ಬಳಸಲಾಗಿದೆ.
ಕೂಲಿಕಾರರ ಮೂಲಕ ಮಣ್ಣು ಸಮತಟ್ಟು ಮಾಡಿ, ಸ್ವಚ್ಛತೆ ಕಾರ್ಯಕೈಗೊಳ್ಳಬೇಕು. ಆದರೆ, ಗ್ರಾಪಂ ಅಧಿಕಾರಿಗಳು ಹಾಗೂ ಕೆಲ ಜನಪ್ರತಿನಿಧಿಗಳು ಟ್ರ್ಯಾಕ್ಟರ್ ಮೂಲಕ ಮಣ್ಣು ಸಮತಟ್ಟು ಮಾಡಿ, ಕೂಲಿಕಾರರಿಗೆ ಕೆಲಸ ನೀಡದೆ ವಂಚನೆ ಮಾಡಿದ್ದಾರೆ. ಇದರಿಂದ ಸರ್ಕಾರದ ಯೋಜನೆಯ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಶಾಲೆ ಆವರಣದಲ್ಲಿ ಎಲ್ಲೆಂದರಲ್ಲಿ ತಗ್ಗುಬಿದ್ದು, ಮುಳ್ಳುಕಂಠಿಗಳು ಬೆಳೆದಿದ್ದವು. ಇದರಿಂದ ಮಕ್ಕಳಿಗೆ ತೊಂದರೆ ಆಗಿತ್ತು. ಈ ಹಿನ್ನೆಲೆ ನರೇಗಾ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಆದರೆ, ಕೂಲಿಕಾರರಿಗೆ ಕೆಲಸ ನೀಡದೆ ಯಂತ್ರಗಳ ಬಳಕೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೂಡಲೇ ಸಂಬಂಧಿಸಿದ ಮೇಲಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ, ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮಸ್ಥರಿಗೆ ಕೆಲಸ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೋಟ್===
ಮೇದರಗೋಳ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಮರಳು ಸಮತಟ್ಟು ಯೋಜನೆ ಬಗ್ಗೆ ಗಮನಕ್ಕಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಯಂತ್ರಬಳಕೆಗೆ ಅವಕಾಶವಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ.
| ಸತ್ಯಪ್ಪ ರಾಠೋಡ್
ದೊಂಡಂಬಳಿ ಗರಾಪಂ ಪಿಡಿಒ