ಉದ್ಯೋಗ ಖಾತ್ರಿ ಚೀಟಿ ತಾಂತ್ರಿಕ ಸಮಸ್ಯೆ- ಪ್ರತಿಭಟನೆ

ದೇವದುರ್ಗ,ಜೂ.೨೬-
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಬಹುತೇಕ ಜಾಬ್ ಕಾರ್ಡ್‌ಗಳಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಸಕಾಲದಲ್ಲಿ ಕೂಲಿಕಾರರಿಗೆ ಕೆಲಸ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯಿಂದ ತಾಲ್ಲೂಕು ಪಂಚಾಯತ ಮುಂದೆ ಪ್ರತಿಭಟನೆ ಮಾಡಲಾಯಿತು.
ಸಂಘಟನೆ ತಾಲ್ಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ ಮಾತಾಡಿ, ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೂಲಿಕಾರರಿಗೆ ಕೆಲಸ ನೀಡಬೇಕಾಗಿದ್ದ ಗ್ರಾಮ ಪಂಚಾಯತಿಗಳು ಉದ್ಯೋಗ ಚೀಟಿಯಲ್ಲಿನ ತಾಂತ್ರಿಕ ಸಮಸ್ಯೆ ಮುಂದಿಟ್ಟು ಅವರನ್ನು ಕೆಲಸದಿಂದ ವಂಚಿಸುತ್ತಿದ್ದಾರೆ ಎಂದು ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಕೂಲಿಕಾರರು ಕೆಲಸ ಬಯಸಿ ದೂರದ ನಗರಗಳಿಗೆ ಗೂಳೆ ಹೋಗಬಾರದು,ಸ್ವಂತ ಊರುಗಳಲ್ಲೆ ಕೆಲಸ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಾದರಿಯಾಗಬೇಕಿದ್ದ ಯೋಜನೆಯಾಗಬೇಕಿತ್ತು ಆದರೆ ಇಲಾಖೆಯ ಅಧಿಕಾರಿಗಳೇ ಅದರ ಉದ್ದೇಶ ಮತ್ತು ಗುರಿ ಬುಡಮೇಲು ಮಾಡಲು ಹೊರಟಿದ್ದಾರೆ.
ನಂತರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸಂಗಮೇಶ ಮೂಲಿಮನಿ ಮಾತನಾಡಿ,ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಅನೇಕ ಕಾರ್ಯಕ್ರಮಗಳು,ಜಾಗೃತಿ ಸಭೆಗಳು ನಡೆಸುತ್ತಿದ್ದರೂ ವಾಸ್ತವವಾಗಿ ಗ್ರಾಮೀಣ ಪ್ರದೇಶದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಂಪ್ಯೂಟರ್ ಆಪರೇಟರ್ ಗಳು, ದಿವ್ಯ ನಿರ್ಲಕ್ಷ್ಯಗಳಿಂದ ಇಂತಹ ತಾಂತ್ರಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದರು.
ಸರ್ಕಾರದ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳೇ ಉದ್ಯೋಗ ಖಾತ್ರಿ ಮತ್ತು ಉದ್ಯೋಗ ಚೀಟಿ ಹಾಗೂ ಕೆಲಸದ ಬಗ್ಗೆ ವಿಳಂಬ ಸೇರಿದಂತೆ ತಾಂತ್ರಿಕ ತೊಂದರೆಯನ್ನು ಪಿಡಿಓ,ಕಂಪ್ಯೂಟರ್ ಆಪರೇಟರ್, ಟೆಕ್ನಿಕಲ್ ಇಂಜಿನಿಯರ್, ಬಿಎಫ್ಟಿಗಳೇ ಖುದ್ದಾಗಿ ಕೂಲಿಕಾರ್ಮಿಕರಲ್ಲಿನ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಸಮಸ್ಯೆ ಸರಿಪಡಿಸುವಂತೆ ನಿರ್ದೇಶನ ನೀಡಿದ್ದಾರೆ. ಅಲ್ಲದೇ ಜಾಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಈಗಾಗಲೇ ಕೆಲಸಕ್ಕೆ ಅರ್ಜಿ ಸಲ್ಲಿಸಿ ೨-೩ ತಿಂಗಳು ಕಳೆದರು ಇವತ್ತಿಗೂ ಕೆಲಸ ನೀಡದೆ ಇಡೀ ಆಡಳಿತ ಮಂಡಳಿ ದಿವ್ಯ ನಿರ್ಲಕ್ಷ್ಯ ವಹಿಸಲಾಗಿದೆ. ಮಸರಕಲ್, ಜಾಲಹಳ್ಳಿ, ಚಿಂಚೋಡಿ, ಪಲಕನಮರಡಿ ಸೇರಿದಂತೆ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಜಾಬ್ ಕಾರ್ಡ್‌ಗಳು ಮನಬಂದಂತೆ ಮಾಡಲಾಗಿದ್ದು,ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆಪರೇಟರ್ ಹಾಗೂ ಪಿಡಿಓ ಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಶಿವನಗೌಡ ನಾಯಕ ಮದರಕಲ್, ಸುರೇಶಗೌಡ ಹಂರಗುಂದಿ ,ಶರಣಪ್ಪ, ನರಸಪ್ಪ, ತಮ್ಮಣ್ಣ, ನರೇಶ್, ಬಸವರಾಜ ಮೂಡಲಗುಂಡ, ವಿರೇಶ ಮದರಕಲ್ಲ, ಶಾಂತಕುಮಾರ್ ಮಕಾಶಿ, ಆನಂದ ಚಲುವಾದಿ, ಯಲ್ಲಪ್ಪ ಗಚ್ಚಿನಮನಿ, ರಂಗಣ್ಣ ದೇವರಗುಡ್ಡ, ಮುದುಕಪ್ಪ ಉಪಸ್ಥಿತರಿದ್ದರು.