ಉದ್ಯೋಗ ಕಡಿತ ಬಿಜೆಪಿ ಸಾಧನೆ

ತುಮಕೂರು, ನ. ೨- ದೇಶದ ಯುವಜನರು ದೊಡ್ಡ ಪ್ರಮಾಣದ ಉದ್ಯೋಗದ ಸಮಸ್ಯೆ ಎದುರಿಸುತ್ತಿದ್ದು, ಯುವಜನರು ಯಾವ ಭರವಸೆ ಇಟ್ಟುಕೊಂಡು ಬಿಜೆಪಿಗೆ ಮತ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಪ್ರಶ್ನಿಸಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್‌ಟಿ ಮತ್ತು ನೋಟು ಅಮಾನೀಕರಣದ ಪರಿಣಾಮವಾಗಿ ಯುವಜನರಿಗೆ ಹೆಚ್ಚು ಉದ್ಯೋಗ ಒದಗಿಸುತ್ತಿದ್ದ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ಮುಚ್ಚಿ ಹೋದ ಪರಿಣಾಮ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳುವಂತಾಯಿತು. ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕಳೆದ ಆರು ವರ್ಷಗಳಲ್ಲಿ ಅದನ್ನು ಈಡೇರಿಸಿದೆಯೇ, ಇದನ್ನು ಪ್ರತಿಯೊಬ್ಬ ಯುವ ಮತದಾರರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಇದುವರೆಗೂ ಇದ್ದ ಭೂ ಹಿಡುವಳಿ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿ ಕೈತಪ್ಪಿ ಕಂಪೆನಿ ಕೃಷಿಕರ ಪಾಲಾಗಲಿದೆ. ಇದರ ಪರಿಣಾಮ ರೈತರ ಮಕ್ಕಳು ದೊಡ್ಡ ದೊಡ್ಡ ಕೃಷಿ ಕಂಪೆನಿಗಳ ಮುಂದೆ ಕೂಲಿಯಾಳಾಗಿ ದುಡಿಯುವ ಪರಿಸ್ಥಿತಿಯನ್ನು ಬಿಜೆಪಿ ತಂದೊಡ್ಡಿದೆ. ಆದ್ದರಿಂದ ರೈತರು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಜಿ.ಎಸ್.ಟಿ ಅವೈಜ್ಞಾನಿಕ ಜಾರಿ ಹಾಗೂ ನೋಟು ಅಮಾನೀಕರಣದಿಂದ ಹಲವಾರು ಕಾರ್ಖಾನೆಗಳು ಮುಚ್ಚಿದ್ದು, ಅತಿಯಾದ ಜಿ.ಎಸ್.ಟಿ ತೆರಿಗೆಯಿಂದ ಸುಮಾರು ೧೨ ಲಕ್ಷಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ಗ್ರಾತದ ಉದ್ದಿಮೆಗಳು ಮುಚ್ಚಿದ ಪರಿಣಾಮ ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಮತ್ತು ಕಾರ್ಮಿಕರ ಕುಟುಂಬ ಬೀದಿಗೆ ಬಿದ್ದಿವೆ. ಹಾಗಾಗಿ ಸಿರಾ ಮತ್ತು ಆರ್.ಆರ್.ನಗರ ಉಪ ಚುನಾವಣೆಯಲ್ಲಿ ಮತ ಹಾಕುವಾಗ ಬಿಜೆಪಿಯನ್ನು ತಿರಸ್ಕರಿಸುವಂತೆ ಕರೆ ನೀಡಿದ ಅವರು, ಸಿರಾ ಮತ್ತು ಆರ್.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಕಾರ್ಮಿಕರು, ಯುವಕರು, ರೈತರು ಮತ ಚಲಾಯಿಸುವಂತೆ ಮನವಿ ಮಾಡಿದರು.
ಮಾಜಿ ಸಚಿವ ಹೆಚ್. ಆಂಜನೇಯ ಮಾತನಾಡಿ, ಸಿರಾ ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಕ್ಷೇತ್ರದಲ್ಲಿ ರಸ್ತೆ, ನೀರಾವರಿ, ಕುಡಿಯುವ ನೀರು ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ಕೆಲಸ ಮಾಡಿದ್ದಾರೆ. ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ವೇಳೆ ೭ಕ್ಕೂ ಹೆಚ್ಚು ವಸತಿ ಶಾಲೆಗಳನ್ನು ಅವರ ಕ್ಷೇತ್ರಕ್ಕೆ ಮಂಜೂರು ಮಾಡಿಕೊಟ್ಟಿದ್ದೇನೆ. ಅಭಿವೃದ್ದಿಯೇ ಮೂಲ ಮಂತ್ರವಾಗಿಸಿಕೊಂಡಿರುವ ಟಿ.ಬಿ.ಜಯಚಂದ್ರ ಅವರಿಗೆ ಮತ ನೀಡುವ ಮೂಲಕ ಸಿರಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಅವಕಾಶ ಕಲ್ಪಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕೆಂಚಮಾರಯ್ಯ, ಮುರುಳೀಧರ ಹಾಲಪ್ಪ, ವಾಲೆಚಂದ್ರಯ್ಯ, ವಕೀಲರಾದ ಮರಿಚನ್ನಮ್ಮ, ಉದ್ಯಮಿ ವೆಂಕಟೇಶ್, ಮಾಜಿ ಉಪಮೇಯರ್ ರೂಪಶ್ರೀ, ಶಿವಾಜಿ, ಗೀತಮ್ಮ ಮತ್ತಿತರರು ಉಪಸ್ಥಿತರಿದ್ದರು.