ಉದ್ಯೋಗ ಅಮಿಷ ಖದೀಮನ ಸೆರೆ

೨೦ ಕೋಟಿ ರೂ. ವಂಚನೆ

ಬೆಂಗಳೂರು,ನ.೨೯- ಉದ್ಯೋಗದ ಯುವಕರನ್ನು ಗುರಿಯಾಗಿಸಿಕೊಂಡು ಕೆಲಸದ ಆಮೀಷವೊಡ್ಡಿ ಹಣ ಪಡೆದು ವಂಚನೆ ನಡೆಸುತ್ತಿದ್ದ ಖತರ್ನಾಕ್ ಖದೀಮನನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪವನ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ, ಬಂಧಿತ ಆರೋಪಿಯು ಒಂದಲ್ಲಾ ಎರಡಲ್ಲಾ ಬರೋಬ್ಬರಿ ಒಂದೂ ಸಾವಿರಕ್ಕೂ ಹೆಚ್ಚು ಯುವಕ ಯುವತಿಯರಿಗೆ ಮೋಸ ಮಾಡಿ ಲಕ್ಷಾಂತರ ವಂಚಿಸಿ ಜೈಲು ಸೇರಿದ್ದಾನೆ.ಬಂಧಿತ ಆರೋಪಿ ಪವನ್ ಕುಮಾರ್ ಸೈಮಕ್ ಟೆಕ್ನಾಲಜಿ ಎಂಬ ಕಂಪನಿ ತೆರೆದು ಟೆಕ್ ಪಾರ್ಕ್ ನಲ್ಲಿ ಕಚೇರಿ ಮಾಡುತ್ತಿದ್ದು, ನಮ್ಮ ಕಂಪನಿಯಲ್ಲಿ ಉದ್ಯೋಗ ನೀಡಲಾಗುವುದು ಎಂದು ಪರಿಚಯಸ್ಥರ ಮೂಲಕ ನಿರುದ್ಯೋಗಿ ಯುವಕ,ಯುವತಿಯರಿಗೆ ಗಾಳ ಹಾಕುತ್ತಿದ್ದರು.
ಪವನ್ ಮತ್ತವನ ತಂಡ ಆಂಧ್ರ ಮೂಲದ ವಿದ್ಯಾವಂತರನ್ನೇ ಹೆಚ್ಚು ಗುರಿಯಾಗಿಸಿಕೊಂಡಿದ್ದು,. ಇದುವರೆಗೂ ಒಂದೂ ಸಾವಿರಕ್ಕೂ ಹೆಚ್ಚು ಯುವಕ ಯುವತಿಯರಿಗೆ ಮೋಸ ಮಾಡಿ ೨೦ ಕೋಟಿಗೂ ಅಧಿಕ ವಂಚನೆ ನಡೆಸಿರುವ ಮಾಹಿತಿ ಲಭ್ಯವಾಗಿದೆ.ಪವನ್ ಮತ್ತವನ ತಂಡ ವರ್ಷಕ್ಕೆ ಐದು ಲಕ್ಷ ಪ್ಯಾಕೇಜ್ ನೀಡುವ ಆಮಿಷವೊಡ್ಡುತ್ತಿದ್ದರು. ಅಷ್ಟೇ ಅಲ್ಲ ಬೇರೆ ಕಂಪನಿಯಲ್ಲಿಯೂ ಕೆಲಸ ಕೊಡಿಸುವುದಾಗಿ ಡ್ರಾಮ ಮಾಡಿ ನಂಬಿಸುತ್ತಿದ್ದರು. ಬಳಿಕ ಒಬ್ಬೊಬ್ಬರಿಂದ ಒಂದರಿಂದ ಎರಡು ಲಕ್ಷದವರೆಗೆ ಸುಲಿಗೆ ಮಾಡುತ್ತಿದ್ದು ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಕೊಟ್ಟು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದರು.ಒಂದು ತಿಂಗಳ ಸಂಬಳ ಕೂಡ ನೀಡಿ ಬಳಿಕ ಕಂಪನಿಯ ಬಾಗಿಲು ಮುಚ್ಚಿ ಪರಾರಿಯಾಗುತ್ತಿದ್ದರು. ಹೀಗೆ ನಗರದ ಬೇರೆ ಬೇರೆ ಭಾಗಗಳಲ್ಲಿ ವಂಚನೆ ಮಾಡಿದ್ದಾರೆ. ಹಣ ಕಳೆದುಕೊಂಡ ಯುವಕ, ಯುವತಿಯರು ಕಂಗಾಲಾಗಿ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಸಾವಿರಕ್ಕೂ ಅಧಿಕ ಜನರನ್ನು ವಂಚಿಸಿ ದೆಹಲಿಯಲ್ಲಿ ಕುಳಿತಿದ್ದ ಆರೋಪಿ ಪವನ್‌ನನ್ನು ನಗರಕ್ಕೆ ಕರೆಸಿಕೊಳ್ಳಲು ಪೊಲೀಸರು ಸಂತ್ರಸ್ತರ ಜೊತೆ ಸೇರಿ ಪ್ರಯತ್ನ ನಡೆಸಿ ಮೂವತ್ತು ಮಂದಿ ಕಂಪನಿ ಸೇರಿಕೊಳ್ಳಲು ಬಂದಿದ್ದಾರೆ. ಹಣದ ಜೊತೆಗೆ ರೆಡಿ ಇರುವುದಾಗಿ ನಂಬಿಸಿದ್ದು ಕೂಡಲೇ ವಿಮಾನದಲ್ಲಿ ಬಂದ ಪವನ್‌ನನ್ನು ನಗರದ ಖಾಸಗಿ ಹೋಟೆಲ್‌ಗೆ ಕರೆಸಿಕೊಂಡು ಬಂಧಿಸುವಲ್ಲಿ ಯಶಸ್ವಿಯಾಗಿ ದ್ದಾರೆ.