ಉದ್ಯೋಗಿಗಳ ವಜಾ: ಟ್ವಿಟರ್ ವಿರುದ್ಧ ಕೋರ್ಟ್‌ಗೆ ಮೊರೆ

ಸ್ಯಾನ್ ಫ್ರಾನ್ಸಿಸ್ಕೋ, ನ.೫- ಟ್ವಿಟರ್‌ನ ಸುಮಾರು ಅರ್ಧದಷ್ಟು ಅಂದರೆ ೭,೫೦೦ ಉದ್ಯೋಗಿಗಳಿಗೆ ನೌಕರಿಯಿಂದ ಖೊಕ್ ನೀಡುವ ಎಲಾನ್ ಮಸ್ಕ್ ನಿರ್ಧಾರವನ್ನು ವಿರೋಧಿಸಿ ಅಟಾರ್ನಿ ಶೆನ್ನೊನ್ ಲಿಸ್ಸ್-ರಿಯೋರ್ಡನ್ ಅವರು ಸ್ಯಾನ್ ಫ್ರಾನ್ಸಿಸ್ಕೋ ಫೆಡರಲ್ ಕೋರ್ಟಿನಲ್ಲಿ ಕೇಸ್ ಹೂಡಿದ್ದಾರೆ.
ಸಾಕಷ್ಟು ಮುಂಚಿತವಾಗಿ ನೋಟಿಸ್ ನೀಡದೆ ಉದ್ಯೋಗಿಗಳನ್ನು ಕೈಬಿಡಲಾಗುತ್ತಿರುವುದು ವರ್ಕರ್ ಅಡ್ಜಸ್ಟ್‌ಮೆಂಟ್ ಎಂಡ್ ರಿಟ್ರೈನಿಂಗ್ ನೋಟಿಫಿಕೇಶನ್ ಕಾಯಿದೆಯ ಉಲ್ಲಂಘನೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಈ ಕಾಯಿದೆಯ ನಿಬಂಧನೆಗಳನ್ನು ಅನುಸರಿಸುವಂತೆ ಟ್ವಿಟರ್‌ಗೆ ಸೂಚಿಸಬೇಕು ಹಾಗೂ ಉದ್ಯೋಗದಿಂದ ಕೈಬಿಡುತ್ತಿರುವುದರ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತುವ ಹಕ್ಕನ್ನು ಕೈಬಿಡಬೇಕೆಂದು ಲಿಖಿತ ದಾಖಲೆಗಳಿಗೆ ಟ್ವಿಟರ್ ಸಹಿ ಪಡೆಯುವುದನ್ನು ನಿರ್ಬಂಧಿಸಬೇಕೆಂದೂ ಅರ್ಜಿಯಲ್ಲಿ ಕೋರಲಾಗಿದೆ. ಇನ್ನು ಉದ್ಯೋಗಿಗಳಿಗೆ ಪೂರ್ವ ನೋಟಿಸ್ ನೀಡದೆ, ಖೊಕ್ ನೀಡುವ ಕುರಿತು ಪ್ರತಿಕ್ರಿಯೆ ನೀಡಿರುವ ಮಾಲಕ ಎಲಾನ್ ಮಸ್ಕ್, ಇದೊಂದು ದುರದೃಷ್ಟಕರ ಸಂಗತಿಯಾಗಿದೆ. ಆದರೆ ನಮ್ಮ ಬಳಿ ಬೇರೆ ಆಯ್ಕೆಗಳಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ಟ್ವಿಟರ್ ಸಂಸ್ಥೆಯನ್ನು ಖರೀದಿಸಿದ ಬಳಿಕ ಕ್ರಾಂತಿಕಾರ ಹೆಜ್ಜೆ ಇರಿಸುತ್ತಿರುವ ಎಲಾನ್ ವಿರುದ್ಧ ಈಗಾಗಲೇ ಹಲವೆಡೆ ಆಕ್ರೋಶ ಬುಗಿಲೆದ್ದಿದೆ. ಇನ್ನು ಟ್ವಿಟರ್ ವಜಾಗೊಳಿಸಿದ ನೌಕರರಲ್ಲಿ ಎಂಜಿನಿಯರಿಂಗ್, ಸಂವಹನ, ಉತ್ಪನ್ನ, ಕಂಟೆಂಟ್ ಕ್ಯುರೇಶನ್ ಮತ್ತು ಮೆಷಿನ್ ಲರ್ನಿಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಸಿಬ್ಬಂದಿ ಕೂಡ ಸೇರಿದ್ದಾರೆ.