ಉದ್ಯೋಗಖಾತರಿ ಕಾಮಗಾರಿ ಕಳಪೆ; ಲೋಕಾಯುಕ್ತಕ್ಕೆ ದೂರು

ದಾವಣಗೆರೆ.ಮಾ.೧: ಹೊನ್ನಾಳಿಯ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದಲ್ಲಿ ಉದ್ಯೋಗಖಾತರಿಗೆ ಸಂಬಂಧಿಸಿದಂತೆ ಕಾಮಗಾರಿಗಳು ಕಳಪೆಯಾಗಿದ್ದು, ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಕರ್ನಾಟಕ ರಕ್ಷಣಾ  ವೇದಿಕೆ ಯುವಸೇನೆಯ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಘಟಕ  ತಿಳಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ  ಪ್ರಧಾನ ಕಾರ್ಯದರ್ಶಿ ಮನೋಜ್ ಕೋಟೆಮಲ್ಲೂರು,  ವೇದಿಕೆ ವತಿಯಿಂದ ಕಳೆದ ವರ್ಷವೇ ಓಂಬುಡ್ಸ್ ಮನ್  ಹಾಗೂ ಜಿಲ್ಲಾ ಪಂಚಾಯತ್ ಅವರಿಗೆ ದೂರನ್ನು ನೀಡಲಾಗಿದ್ದು, ಎಲ್ಲಾ ಕಾಮಗಾರಿಗಳನ್ನು ಸ್ಥಳ ಪರಿಶೀಲನೆ ನಡೆಸಿದ್ದರು. ಕಾಮಗಾರಿ ಕಳಪೆ ಎಂದು ದೃಢಪಟ್ಟು, ಎಇಇ ಅಜ್ಜಪ್ಪ, ಟಿಎಇಗಳಾದ ಯೋಗೇಶ್ವರ್, ಸುಂದ್ರೇಶ್, ನಾಗರಾಜ್ ಅವರಿಂದ ೧,೦೨,೧೮೫ ರೂಪಾಯಿಗಳನ್ನು  ತಂಡವಾಗಿ ಕಟ್ಟಲು ಆದೇಶಿಸಿರುತ್ತಾರೆ ಎಂದರು.ಆದರೆ ದಂಡ ಹಾಕುವುದಕ್ಕಿಂತ ಇವರುಗಳು ಮಾಡಿರುವ ತಪ್ಪಿಗೆ ಶಿಕ್ಷೆ ಆಗಬೇಕು. ಕಾರಣ ನಮ್ಮ ಕಣ್ಣಿಗೆ ಕಾಣುವಂತೆ ಇಷ್ಟು ಅವ್ಯವಹಾರವಾಗಿದ್ದರೆ, ನಿಮಗೆ ಕಾಣದ ಹಾಗೆ ಇನ್ನೆಷ್ಟು ಮಾಡಿರಬಹುದು? ಹಾಗಾಗಿ ಸರ್ಕಾರ ಇವರು ಮತ್ತೆ ಇಂತಹ ತಪ್ಪು ಮಾಡದಂತೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.ಸುಂಕದಕಟ್ಟೆ, ಸಿಸಿ ರಸ್ತೆ ಕಾಮಗಾರಿ ವೆಚ್ಚ ೨೫ ಲಕ್ಷ ರೂ, ಗಂಗನಕಟ್ಟೆ, ವಡೆಯರ್ ಹತ್ತೂರು, ಕುಂಕುವ ಗ್ರಾಮದ ರಸ್ತೆ ಮೆಟ್ಲಿಂಗ್ ಹಾಗೂ ‘ನಮ್ಮ ಹೊಲ ನಮ್ಮ ದಾರಿ’ ಕಾಮಗಾರಿಗಳಿಗೆ ೭೫ ಲಕ್ಷ ರೂ. ವೆಚ್ಚವಾಗಿದ್ದು, ಸುಮಾರು ೧ ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಿರುವ ಕಳಪೆ ಕಾಮಗಾರಿಗೆ  ಕೇವಲ ಲಕ್ಷ ರೂ. ದಂಡ ವಿಧಿಸಿದ್ದಾರೆ.  ಇಂತಹ ಕೆಲಸ ಮಾಡಿದಂತೆ ತಡೆಯಬೇಕಾದರೆ ಶಿಕ್ಷೆ ವಿಧಿಸುವ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ನಾವು ಕಳಪೆ ಕಾಮಗಾರಿ ವಿರುದ್ಧ ಬೆಂಗಳೂರಿನ ಲೋಕಾಯುಕ್ತಕ್ಕೆ ದೂರು ನೀಡಲಿದ್ದೇವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ, ತಾಲ್ಲೂಕು ಅಧ್ಯಕ್ಷ ಜೆ. ಮಂಜು, ಮಲ್ಲೇಶ್ ಮಾಳಕ್ಕಿ, ಹೆಚ್.ಕೆ. ಹರೀಶ್ ಉಪಸ್ಥಿತರಿದ್ದರು.