ಉದ್ಯೋಗಕ್ಕೆ ತಕ್ಕಂತೆ ಕೌಶಲ್ಯ ಬೆಳೆಸಿಕೊಳ್ಳಿ: ಡಾ ಜಿಎಂ ಸಿದ್ದೇಶ್ವರ

ಸಂಜೆವಾಣಿ ವಾರ್ತೆ

ದಾವಣಗೆರೆ.ಅ.೩೧; ಸಾಕಷ್ಟು ಉದ್ಯೋಗವಕಾಶಗಳು ಲಭ್ಯವಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ  ಕೌಶಲ್ಯತೆಯನ್ನು ಬೆಳೆಸಿಕೊಳ್ಳಬೇಕೆಂದು ಸಂಸದರಾದ ಡಾ ಜಿಎಂ ಸಿದ್ದೇಶ್ವರ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಕಿವಿ ಮಾತು ಹೇಳಿದರು. ಎಸ್ ಎಸ್ ಎಲ್ ಸಿ ಇಂದ ಹಿಡಿದು ಪಿಜಿ ಯವರೆಗೆ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಕಂಪನಿ ಉದ್ಯೋಗವಕಾಶಗಳು ಲಭ್ಯವಿದ್ದು, ಪೂರ್ಣ ಪ್ರಮಾಣದ ಪ್ರಯತ್ನದಿಂದ ನಿಮ್ಮ ನೆಚ್ಚಿನ ಕಂಪನಿಯ ಉದ್ಯೋಗ ಪಡೆಯಬಹುದಾಗಿದೆ ಎಂದು ತಿಳಿಸಿದರು. ಹರಿಹರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ 2023 ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಇಂದಿಲ್ಲಿ ಮಾತನಾಡಿದರು. ಜಿ ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಹಾಗೂ ತರಬೇತಿ ಮತ್ತು ಉದ್ಯೋಗ ವಿಭಾಗ ಜಿಎಂಐಟಿ ಇವರುಗಳ ಆಶಯದಲ್ಲಿ ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ತಂದೆಯವರಾದ ಶ್ರೀ ಜಿ ಮಲ್ಲಿಕಾರ್ಜುನಪ್ಪ ನವರ 20ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಚಾರಿಟಿ ಫೌಂಡೇಶನ್ ಅಡಿಯಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅವುಗಳಲ್ಲಿ ಉದ್ಯೋಗ ಮೇಳ, ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರಗಳು, ವಾಕಥಾನ್, ಮ್ಯಾರಥಾನ್, ಸಣ್ಣ ಕೈಗಾರಿಕಾ ಅಡಿಯಲ್ಲಿ ಸಕ್ರಿಯ ಮಹಿಳಾ ಸಂಘಗಳಿಗೆ  ಉದ್ಯೋಗ ಸೃಷ್ಟಿಗೆ ಬೇಕಾದ ಸಂಪನ್ಮೂಲಗಳ ವಿತರಣೆ ಹಾಗೂ ಮುಂತಾದ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು. ಹರಿಹರದ ಮಾನ್ಯ ಶಾಸಕರಾದ ಶ್ರೀ ಬಿ ಪಿ ಹರೀಶ್ ರವರು ಮಾತನಾಡಿ, ಹರಿಹರ ಜನತೆಗೆ ಇದೊಂದು ಸುವರ್ಣ ಅವಕಾಶ. 56 ಕಂಪನಿಗಳು ಒಂದೇ ಸೂರಿನ ಅಡಿಯಲ್ಲಿ ಲಭ್ಯವಿದ್ದು, ಉದ್ಯೋಗ ಆಕಾಂಕ್ಷಿಗಳು ಇದರ ಲಾಭವನ್ನು ಪಡೆಯಬೇಕೆಂದು ಕರೆ ಕೊಟ್ಟರು.