ಉದ್ಯಾನವನ ಸಮಯ ವಿಸ್ತರಣೆ

ಬೆಂಗಳೂರು, ನ.೧೬- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉದ್ಯಾನವನಗಳಿಗೆ ಸಾರ್ವಜನಿಕರು ಭೇಟಿ ನೀಡುವ ಸಮಯವನ್ನು ವಿಸ್ತರಣೆ ಮಾಡಲಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಕುರಿತು ಆದೇಶ ಹೊರಡಿಸಿದ್ದು, ಉದ್ಯಾನವನಗಳು ಇನ್ನು ಮುಂದೆ ಪ್ರತಿದಿನ ಬೆಳಗ್ಗೆ ೫ ರಿಂದ ರಾತ್ರಿ ೮ ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತವೆ.
ಇದಕ್ಕೂ ಮುನ್ನ ಉದ್ಯಾನವನಗಳು ಬೆಳಗ್ಗೆ ೬ ರಿಂದ ೧೦ ಮತ್ತು ಸಂಜೆ ೪ ರಿಂದ ೭ ರವರೆಗೆ ಮಾತ್ರ ಸಾರ್ವಜನಿಕರಿಗೆ ಮುಕ್ತವಾಗಿದ್ದವು. ಇದೀಗ ಉದ್ಯಾನವನಗಳ ಪ್ರವೇಶ ಸಮಯ ಬದಲಾವಣೆ ಆಗಿದೆ.
ಅಲ್ಲದೆ, ಉದ್ಯಾನವನಗಳಲ್ಲಿ ಬೆಳಗ್ಗೆ ೧೦ ಗಂಟೆಯ ಬಳಿಕ ಜನರಿಗೆ ವಿಶ್ರಾಂತಿ ಪಡೆಯಲು ಉಚಿತ ಸಾರ್ವಜನಿಕ ಪ್ರವೇಶವನ್ನು ನಿರಾಕರಿಸಲಾಗಿತ್ತು. ಹಲವು ಕಾಲಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿತ್ತು.ಇದೀಗ ಸಾರ್ವಜನಿಕರ ಬಯಕೆಯಂತೆ ಅವಧಿ ವಿಸ್ತರಣೆ ಆಗಿದೆ.
ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ೧,೧೧೮ ಉದ್ಯಾನಗಳಿವೆ. ಕೆಲ ಉದ್ಯಾನಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣೆ ಮಾಡುತ್ತಿದೆ.ಇನ್ನೂ, ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್‌ಗಳನ್ನು ರಾಜ್ಯದ ತೋಟಗಾರಿಕೆ ಇಲಾಖೆ ನಿರ್ವಹಿಸುತ್ತದೆ. ನಗರದಲ್ಲಿ ಈ ಎರಡು ಉದ್ಯಾನವನಗಳು ಮಾತ್ರ ದಿನವಿಡೀ ತೆರೆದಿರುತ್ತವೆ.
ಬಿಬಿಎಂಪಿ ಉದ್ಯಾನವನಗಳನ್ನು ದಿನವಿಡೀ ತೆರೆದಿಡಲು ಕಷ್ಟಸಾಧ್ಯ. ಏಕೆಂದರೆ ಮುಂಜಾನೆ ಅಥವಾ ಸಂಜೆಯ ವೇಳೆ ಅವುಗಳನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ.
ಈಗ ಸ್ವಚ್ಛತೆಗೆ ಸಿಬ್ಬಂದಿಗೆ ಬೆಳಗಿನ ಜಾವ ಎರಡೂವರೆ ಗಂಟೆ ಕಾಲಾವಕಾಶ ನೀಡಿದ್ದೇವೆ.
ಜೊತೆಗೆ ಹೊಸ ಸಮಯಕ್ಕೆ ಬದ್ಧವಾಗಿರುವಂತೆ ನಾವು ಎಲ್ಲಾ ಅಧಿಕಾರಿಗಳಿಗೆ ಸುತ್ತೋಲೆಯಲ್ಲಿ ತಿಳಿಸಿದ್ದೇವೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.