ಉದ್ಯಾನವನಗಳಿಗೆ ಮೀಸಲಿಟ್ಟ ಜಾಗ ಕಬಳಿಕೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೩: ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿರುವ ಒಂದೊಂದೇ ಅಕ್ರಮಗಳು ಬಯಲಿಗೆ ಬರುತ್ತಿವೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಪಾಲಿಕೆ ವ್ಯಾಪ್ತಿಯ ಜಾಗ, ರಾಜಕಾಲುವೆ, ಉದ್ಯಾನವನಗಳ ಜಾಗ ಕಬಳಿಸಲಾಗಿದೆ. ಅಧಿಕಾರಿಗಳನ್ನು ಬಳಸಿಕೊಂಡು ಈ ಹಗರಣಗಳು ನಡೆದಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಪಾಲಿಕೆಯ ಸದಸ್ಯ ಎ.ನಾಗರಾಜ್  ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾನಗರ ಪಾಲಿಕೆಯ ಎಸ್. ಎಸ್. ಬಡಾವಣೆ 23 ನೇ ವಾರ್ಡ್ ಗೆ ಸೇರಿದ ಸಾರ್ವಜನಿಕ ಬಳಕೆಗೆ ಇರುವಂಥ ಸರ್ಕಾರಿ ಜಾಗವನ್ನು ಕಬಳಿಸಲಾಗಿದೆ. ಮಾತ್ರವಲ್ಲ, ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಮಾರಾಟ ಮಾಡಿರುವುದು ಗೊತ್ತಾಗಿದೆ ಎಂದು ತಿಳಿಸಿದರು. ನಗರದ ಲಕ್ಷ್ಮೀ ಫ್ಲೋರ್ ಮಿಲ್ ಬಳಿ ಇರುವ ಪಾಲಿಕೆಯ ವಲಯ -2 ಕ್ಕೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿ ರಿ. ಸರ್ವೆ ನಂ. 78/2 ಜಾಗಕ್ಕೆ ಡೋರ್ ನಂಬರ್ ಕೊಟ್ಟು 3937/11, 3937/12, 3937/13, 3937/14 ರಲ್ಲಿ ತಲಾ 30*40 ಅಳತೆಯ ಸೈಟ್ ಗಳನ್ನಾಗಿ ವಿಂಗಡಿಸಿ ನಾಲ್ಕು ಮಂದಿಗೆ ನೋಂದಣಿ ಮಾಡಿಕೊಳ್ಳಲು ಪಾಲಿಕೆಯಿಂದಲೇ ಖಾತೆ ಮಾಡಿಕೊಡಲಾಗಿದೆ ಎಂದರು.ಸರ್ಕಾರಿ ಖಾಲಿ ನಿವೇಶನ ಮೀಸಲಿಟ್ಟಿದ್ದದ್ದು ಸಾರ್ವಜನಿಕರ ಬಳಕೆಗಾಗಿ. ಆಸ್ಪತ್ರೆ, ಪಾರ್ಕ್ ಅಥವಾ ಶಾಲೆ ಸೇರಿದಂತೆ ಜನರಿಗಾಗಿ ಎಸ್ ಎಸ್ ಬಡಾವಣೆಯ ಈ ಜಾಗ ಕಾಯ್ದಿರಿಸಲಾಗಿತ್ತು. ಮಧ್ಯವರ್ತಿಗಳು ಹಾಗೂ ಪಾಲಿಕೆಯ ಸಿಬ್ಬಂದಿ ಸೇರಿ ಆಸ್ತಿ ವಿವರದ ಎಂಎಆರ್ -19, ಕೆಎಂಎಫ್-24 ಆಸ್ತಿ ವಿವರದ ದಾಖಲೆ ಪುಸ್ತಕಗಳಲ್ಲಿ ತಿದ್ದುಪಡಿ ಮಾಡಿ ಕ್ರಯ ಮಾಡಲು ಹಾಗೂ ಮಾರಾಟ ಮಾಡಲು ಅನುಕೂಲ ಮಾಡಿಕೊಟ್ಟಿದ್ದು ಯಾಕೆ. ಈಗಾಗಲೇ ಈ ನಿವೇಶನಗಳಿಗೆ ಡೋರ್ ನಂಬರ್ ಕೊಟ್ಟು ಖಾತೆ ಕೂರಿಸಲಾಗಿದೆ. ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿಯೂ ರಿಜಿಸ್ಟರ್ ಈಗಾಗಲೇ ಆಗಿದೆ ಎಂದು ಮಾಹಿತಿ ನೀಡಿದರು. ಮೇಲಾಧಿಕಾರಿಗಳ ಅನುಮತಿ ಇಲ್ಲದೇ, ಮೂಲ ದಾಖಲಾತಿ ಪರಿಶೀಲಿಸದೇ, ಪಾಲಿಕೆ ಉದ್ಯಾನವನ ಜಾಗವನ್ನು ಅಕ್ರಮವಾಗಿ ನಮೂನೆ -3ರಲ್ಲಿ ಸೇರಿಸಿ ಡೋರ್ ನಂಬರ್ ಕೊಡಲಾಗಿದೆ. ತಪ್ಪು ಎಸಗಿದ ಕಾರಣಕ್ಕೆ ಕಳೆದ ಜುಲೈ 14ರಂದು ಪಾಲಿಕೆಯ ಕಂದಾಯ ಇಲಾಖೆಯ ಕರ ವಸೂಲಿಗಾರರಾದ ಸಿ. ಸುನೀತಾ ಅವರನ್ನು ಅಮಾನತುಗೊಳಿಸಲಾಗಿದೆ. ಡೋರ್ ನಂಬರ್ 1882/81 A ಅಳತೆ 115*115 ಅಡಿಗಳ ಸ್ವತ್ತು ಅಕ್ರಮವಾಗಿ ಬೇರೆಯವರಿಗೆ ಮಾಡಿಕೊಡಲಾಗಿದೆ. ಬಿಜೆಪಿಯವರು ಇದೇ ರೀತಿಯಲ್ಲಿ ಹಲವೆಡೆ ಮಾಡಿದ್ದು ಒಂದೊಂದಾಗಿಯೇ ಹೊರಗೆ ಬರುತ್ತಿವೆ ಎಂದು ಹೇಳಿದರು. ಖಾಸಗಿ ಬಡಾವಣೆಗಳ ಮಾಲೀಕರ ಜೊತೆಗೆ ಶಾಮೀಲಾಗಿ ಕೆಲ ಬಡಾವಣೆಗಳಲ್ಲಿ ಪಾರ್ಕ್ ಉದ್ದೇಶಕ್ಕೆ ಇಟ್ಟಂಥ ಜಾಗಗಳಿಗೆ ಅಕ್ರಮವಾಗಿ ಡೋರ್ ನಂಬರ್ ನೀಡಿದ ಪ್ರಕರಣಗಳಿವೆ. ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸರ್ಕಾರಿ ಜಾಗಗಳನ್ನು ಸರ್ಕಾರದ ವಶಕ್ಕೆ ಮರಳಿ ಪಡೆಯಬೇಕು. ಇನ್ನು ಕೆಲವು ಕಡೆಗಳಲ್ಲಿ ಇದೇ ರೀತಿಯ ಅಕ್ರಮಗಳನ್ನು ಮಾಡಿದ್ದು, ದಾಖಲೆ ಸಮೇತ ಮುಂದಿನ ದಿನಗಳಲ್ಲಿ ಬಯಲು ಮಾಡುವುದಾಗಿ ತಿಳಿಸಿದರು. ನೂತನ ಖಾಸಗಿ ಬಸ್ ನಿಲ್ದಾಣ, ಅಶೋಕ ರಸ್ತೆಯಲ್ಲಿನ ಅಂಡರ್ ಬ್ರಿಡ್ಜ್ ಕಾಮಗಾರಿಗಳು ಅವೈಜ್ಞಾನಿಕವಾಗಿದೆ. ಕಮೀಷನ್ ಆಸೆಗಾಗಿ ಬೇಕಾಬಿಟ್ಟಿಯಾಗಿ ನಿರ್ಮಾಣ ಮಾಡಿರುವ ಬಿಜೆಪಿಯವರು ಇದರಿಂದ ಹಣ ಪಡೆದಿದ್ದಾರೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಬದಲು ಕಮೀಷನ್ ಹಣದ ಆಸೆಗಾಗಿ ಅವ್ಯವಸ್ಥೆ ಮಾಡಿದ್ದು, ಈ ಕುರಿತಂತೆ ತನಿಖೆಯಾದರೆ ಎಲ್ಲವೂ ಬೆಳಕಿಗೆ ಬರಲಿವೆ ಎಂದರು.ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರುಗಳಾದ ಮಂಜುನಾಥ್ ಗಡಿಗುಡಾಳ್, ಕೆ.ಚಮನ್ ಸಾಬ್, ನಾಗರಾಜ್ ಪಾಮೇನಹಳ್ಳಿ, ಉದಯ ಕುಮಾರ್, ಉಮೇಶ್, ಜಗದೀಶ್ ಉಪಸ್ಥಿತರಿದ್ದರು.