ಉದ್ಯಾನವನಕ್ಕೆ ಬರುವ ಬಡ, ಕೂಲಿ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಎರಡು ಗಂಟೆಗಳ ಕಾಲ ಪಾಠ

ಕಲಬುರಗಿ,ಮಾ.27: ನಗರದಲ್ಲಿನ ಉದ್ಯಾನವನಕ್ಕೆ ಬರುವ ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಸುಮಾರು ಎರಡು ಗಂಟೆಗಳ ಕಾಲ ದಂಪತಿ ಉಚಿತವಾಗಿ ಪಾಠ ಮಾಡುವ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ. ಇದರಿಂದಾಗಿ ಒಂದರಿಂದ ಹತ್ತನೇ ತರಗತಿಯವರೆಗೆ ಓದುವ ಸುಮಾರು ನೂರಕ್ಕೂ ಅಧಿಕ ಮಕ್ಕಳಿಗೆ ದಂಪತಿ ಪಾಠ ಬೋಧಿಸುತ್ತಿದ್ದಾರೆ.
ಬಯಲಲ್ಲಿಯೇ ಚಾಪೆ ಹಾಕಿ, ಪೆನ್ನು, ಪುಸ್ತಕ ಹಿಡಿದು ಕುಳಿತಿರುವ ಮಕ್ಕಳು. ಮುಂದೆ ನಿಂತು ಪಾಠ ಹೇಳಿಕೊಡುತ್ತಿರುವ ಶಿಕ್ಷಕರು. ಇದೇನು ಬಯಲು ಪಾಠ ಶಾಲೆನಾ ಎಂದು ಕೇಳ್ತೀರಾ?, ಒಂಥರ ಹಾಗೇನೇ, ಆದಾಗ್ಯೂ, ಈ ಬಯಲು ಪಾಠಶಾಲೆ ಮಾತ್ರ ನಡೆಯೋದು ಕೇವಲ ಎರಡು ಗಂಟೆಗಳ ಕಾಲ. ಅದು ಬೇರೆ ಆರು ವಿಷಯಗಳು ಅಲ್ಲ. ಎರಡು ತಪ್ಪಿದರೆ ಮೂರಷ್ಟೇ. ಅರೇ ಇದ್ಯಾವ ಪರಿ ಶಾಲೆ ಎನ್ನುತ್ತೀರಾ. ಅದು ನಿಜ. ಅದನ್ನು ಕೇಳಿದರೆ ಭೇಷ್ ಎನ್ನಬೇಕಾಗುತ್ತದೆ.
ಹೌದು. ಬಯಲು ಶಾಲೆಯಲ್ಲಿ ಮಹೇಶ್ ಬಡಿಗೇರ್ ಹಾಗೂ ಶ್ರೀಮತಿ ಸುಮಿತ್ರಾ ಬಡಿಗೇರ್ ಅವರು ನಗರದ ವೀರೇಂದ್ರ ಪಾಟೀಲ್ ಬಡಾವಣೆಯ ನಿವಾಸಿಗಳು. ಅವರಲ್ಲಿರುವ ಶಿಕ್ಷಣ ಪ್ರೇಮ ಮಕ್ಕಳಿಗೆ ಬಯಲು ಪಾಠ ಮಾಡಲು ಸ್ಫೂರ್ತಿ ನೀಡಿದೆ. ಹೇಳಿಕೇಳಿ ಮಹೇಶ್ ಬಡಿಗೇರ್ ಅವರು ಕಾಳಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಶಿಕ್ಷಕರಾದರೆ, ಪತ್ನಿ ಸುಮಿತ್ರಾ ಅವರು ಬಿಎಡ್ ಮಾಡಿರುವ ಗೃಹಿಣಿಯಾಗಿದ್ದಾರೆ.
ಎಂಟು ಗಂಟೆಗಳ ಕಾಲ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುವ ಮಹೇಶ್ ಬಡಿಗೇರ್ ಅವರು, ಸಂಜೆ ಮನೆಗೆ ಬಂದ ಮೇಲೆ ಈ ಬಯಲು ಪಾಠ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಪಾಠ ಮಾಡುತ್ತಾರೆ. ಅದಕ್ಕೆ ಅವರ ಪತ್ನಿ ಸುಮಿತ್ರಾ ಅವರು ಸಹಕಾರ ಹಾಗೂ ಬೆಂಬಲ ಕೊಡುತ್ತಾರೆ. ದಿನಂಪ್ರತಿ ಮಕ್ಕಳ ಶಿಕ್ಷಣಕ್ಕಾಗಿ ಬೇಕಾಗಿ ಎರಡು ಗಂಟೆ ಕಾಲ ಮೀಸಲಿಡುತ್ತಾರೆ. ಮಹೇಶ್ ಬಡಿಗೇರ್ ಅವರು ಶಾಲೆ ಬಿಟ್ಟವರು ಮನೆಗೆ ಹೋಗದೇ ನೇರವಾಗಿ ವೀರೇಂದ್ರ ಪಾಟೀಲ್ ಬಡಾವಣೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನಕ್ಕೆ ತೆರಳುತ್ತಾರೆ.
ಉದ್ಯಾನವನಕ್ಕೆ ಬರುವ ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಡುತ್ತಾರೆ. ಒಂದರಿಂದ ಹತ್ತನೇ ತರಗತಿ ಓದುವ ಸುಮಾರು ನೂರಕ್ಕೂ ಅಧಿಕ ಮಕ್ಕಳು ದಂಪತಿಯ ಪಾಠ ಕೇಳಲು ಬರುತ್ತಾರೆ. ಮೂಲತ: ಗಣಿತ ಶಿಕ್ಷಕ ಮಹೇಶ್ ಅವರು ಬಡಾವಣೆಯಲ್ಲಿ ಕಠಿಣ ವಿಷಯಗಳಾದ ಗಣಿತ ಸೇರಿದಂತೆ ಇಂಗ್ಲೀಷ್ ಹಾಗೂ ವಿಜ್ಞಾನ ವಿಷಯಗಳ ಕುರಿತು ಮಕ್ಕಳಿಗೆ ಪಾಠ ಮಾಡುತ್ತಾರೆ.
ಮಹೇಶ್ ಬಡಿಗೇರ್ ಅವರ ಕಾರ್ಯಕ್ಕೆ ಬಡಾವಣೆಯ ಜನರೆಲ್ಲ ಸಹಕಾರ ನೀಡುತ್ತ ಬಂದಿದ್ದಾರೆ. ಉದ್ಯಾನವನದಲ್ಲಿ ನಡೆಸುವ ಶಾಲೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ನೀಡುವ ಮೂಲಕ ನೆರವಾಗಿದ್ದಾರೆ. ಇದೀಗ ಎರಡು ತಿಂಗಳು ಹಿಂದೆ ತರಗತಿ ಪ್ರಾರಂಭಿಸಲಾಗಿದೆ. ಬಡ ಮಕ್ಕಳ ಜೊತೆಗೆ ಇದೀಗ ಮಹೇಶ್ ಅವರ ಅಧ್ಯಯನ ಶೈಲಿಗೆ ಮೆಚ್ಚಿ ಕೆಲ ಶ್ರೀಮಂತ ಕುಟುಂಬದ ಮಕ್ಕಳು ಕೂಡ ಅವರ ತರಗತಿಗೆ ಹಾಜರಾಗುತ್ತಾರೆ. ಜೊತೆಗೆ ಮಹೇಶ್ ಅವರು ತಮ್ಮ ಶಿಕ್ಷಕ ಸ್ನೇಹಿತರು, ಶಿಕ್ಷಣ ತಜ್ಞರನ್ನು ಬಿಡುವಿನ ಸಮಯದಲ್ಲಿ ಕರೆಸಿ ಮಕ್ಕಳಿಗೆ ಹೆಚ್ಚಿನ ಶಿಕ್ಷಣವನ್ನು ಕೊಡಿಸುವಲ್ಲಿಯೂ ಮುತುವರ್ಜಿ ವಹಿಸುತ್ತಾರೆ.
ಒಟ್ಟಿನಲ್ಲಿ ಮಹೇಶ್ ಬಡಿಗೇರ್ ಅವರು ಸರ್ಕಾರಿ ಶಾಲಾ ಶಿಕ್ಷಕರಾಗಿ ದುಡಿಯುವ ವೇತನಕ್ಕೆ ಆರಾಮವಾಗಿ ಜೀವನ ಮಾಡಬಹುದಾಗಿತ್ತು. ಆದಾಗ್ಯೂ, ತನ್ನಂತೆಯೇ ತನ್ನ ಗ್ರಾಮದ ಮಕ್ಕಳು ಕೂಡ ಶಿಕ್ಷಿತರಾಗಬೇಕೆನ್ನುವ ಅವರ ಕನಸಿಗೆ ನಿಜಕ್ಕೂ ಎಲ್ಲರೂ ಅಭಿನಂದಿಸಲೇಬೇಕು.