ಉದ್ಯಮ ಸ್ಥಾಪನೆಗೆ ಪ್ರೇರಣೆ: ಶ್ಲಾಘನೆ

ಬೀದರ್:ಜೂ.3: ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕರಾಗಿದ್ದ ರಮೇಶ ಮಠಪತಿ ಅವರು ನಿರುದ್ಯೋಗಿಗಳಿಗೆ ಸಣ್ಣ ಕೈಗಾರಿಕೆ ಸ್ಥಾಪನೆಗೆ ಪ್ರೇರಣೆ ನೀಡುತ್ತಿದ್ದರು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶರಣಬಸವ ಮಠಪತಿ ಶ್ಲಾಘಿಸಿದರು.

ನಗರದ ಜಿಲ್ಲಾ ಪಂಚಾಯಿತಿಯ ಸಣ್ಣ ಕೈಗಾರಿಕೆ ಇಲಾಖೆ ಕಚೇರಿಯಲ್ಲಿ ವಯೋ ನಿವೃತ್ತಿ ಹೊಂದಿದ ರಮೇಶ ಮಠಪತಿ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಠಪತಿ ಅವರ ಮಾರ್ಗದರ್ಶನದಲ್ಲಿ ಅನೇಕರು ಸ್ವ ಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಿದ್ದಾರೆ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ ಅವರು, ಕೈಗಾರಿಕಾ ವಿಸ್ತರಣಾಧಿಕಾರಿ, ಕೈಗಾರಿಕಾ ಉತ್ತೇಜನಾಧಿಕಾರಿ, ಸಹಾಯಕ ನಿರ್ದೇಶಕ, ಉಪ ನಿರ್ದೇಶಕ ಹುದ್ದೆ ಸೇರಿ ಮಠಪತಿ ಅವರು 40 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಉಪ ನಿರ್ದೇಶಕ ರಾಜಕುಮಾರ ಪಾಟೀಲ ಅವರು, ಮಠಪತಿ ನೌಕರರ ಸಂಘದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ನೌಕರರ ಹಿತ ರಕ್ಷಣೆಗೆ ಶ್ರಮಿಸಿದ್ದರು. ಸಮಾಜೋಧಾರ್ಮಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು ಎಂದು ಬಣ್ಣಿಸಿದರು.

ಉಪ ನಿರ್ದೇಶಕರಾದ ದೇವಿದಾಸ ಜನವಾಡಕರ್, ಶಂಕರ ರೆಡ್ಡಿ, ನಾಗಪ್ಪ ರಂಗಪಾಲೆ, ಮಾಣಿಕರಾವ್, ಗಜರೆ ದಶರಥ, ಮೇಘರಾe ಮಾಳಗೆ ಮಾತನಾಡಿದರು.

ರಮೇಶ ಮಠಪತಿ ದಂಪತಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರೇಮಿಲಾಬಾಯಿ, ನಾಗಪ್ಪ, ಮೀನಾಕ್ಷಿ, ಸಿಡಾಕ್ ಸಂಸ್ಥೆಯ ಸಾಯಿಬಣ್ಣ, ಮಲ್ಲಪ್ಪ, ರಾಮಣ್ಣ ಮಡಿವಾಳ, ಅಂಬಾದಾಸ್ ಇದ್ದರು. ಮನೋಜಕುಮಾರ ವಂದಿಸಿದರು.