ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ: ಮೂವರಿಗೆ ಜೀವಿತಾವಧಿ ಜೈಲುಸಜೆ


ಉಡುಪಿ, ಜೂ.೯- ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿ ಇಂದ್ರಾಳಿಯ ಉದ್ಯಮಿ ಭಾಸ್ಕರ್ ಶೆಟ್ಟಿ (೫೨)ಯನ್ನು ಹತ್ಯೆ ನಡೆಸಿ, ಯಾಗಶಾಲೆಯ ಹೋಮಕುಂಡದಲ್ಲಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಭಾಸ್ಕರ್ ಶೆಟ್ಟಿ ಪತ್ನಿ, ಮಗ ಸೇರಿದಂತೆ ಮೂವರು ಆರೋಪಿಗಳಿಗೆ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಭಾಸ್ಕರ ಶೆಟ್ಟಿಯ ಪತ್ನಿ ರಾಜೇಶ್ವರಿ ಶೆಟ್ಟಿ (೫೩), ಪುತ್ರ ನವನೀತ್ ಶೆಟ್ಟಿ (೩೦) ಹಾಗೂ ನಂದಳಿಕೆಯ ಜ್ಯೋತಿಷಿ ನಿರಂಜನ್ ಭಟ್(೩೦) ಶಿಕ್ಷೆಗೆ ಗುರಿಯಾದ ಆರೋಪಿಗಳು. ಪ್ರಕರಣದ ಸಾಕ್ಷ್ಯನಾಶ ಆರೋಪಿ, ನಿರಂಜನ್ ಭಟ್ ಕಾರು ಚಾಲಕ ರಾಘವೇಂದ್ರನನ್ನು ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ೧೬೭ ಸಾಕ್ಷಿಗಳ ಪೈಕಿ ೭೮ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ, ೨೨೦ ದಾಖಲೆಗಳನ್ನು ಪರಿಶೀಲಿಸಲಾಗಿತ್ತು. ಅಂತಿಮ ತೀರ್ಪು ಲಾಕ್ ಡೌನ್ ಕಾರಣಕ್ಕೆ ಎರಡು ಬಾರಿ ಮುಂದೂಡಲ್ಪಟ್ಟು ಈ ದಿನಕ್ಕೆ ನಿಗದಿಯಾಗಿತ್ತು. ಅದರಂತೆ ನಿನ್ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ಮೂವರು ಆರೋಪಿಗಳನ್ನು ದೋಷಿ ಎಂದು ಘೋಷಿಸಿ, ಮಧ್ಯಾಹ್ನ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದರು. ನಂತರ ಮಧ್ಯಾಹ್ನ ೧೨.೩೦ಕ್ಕೆ ಮೂವರು ಆರೋಪಿಗಳಿಗೆ ಜೀವಿತಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದರು. ಈ ವೇಳೆ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ ಹಾಗೂ ರಾಘವೇಂದ್ರ ಹಾಜರಿದ್ದರು. ಬೆಂಗಳೂರು ಜೈಲಿನಲ್ಲಿರುವ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ವಿಡಿಯೋ ಕಾನ್ಫರೆನ್ಸ್‌ನಲ್ಲಿದ್ದರು. ಇನ್ನೋರ್ವ ಸಾಕ್ಷಿನಾಶ ಆರೋಪಿ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ವಿಚಾರಣೆ ಮಧ್ಯೆ ಅನಾರೋಗ್ಯ ದಿಂದ ಮೃತಪಟ್ಟಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿ ಯೋಜಕ ಶಾಂತರಾಮ್ ಶೆಟ್ಟಿ ವಾದ ಮಂಡಿಸಿದ್ದಾರೆ. ಆರೋಪಿ ರಾಜೇಶ್ವರಿ ಹಾಗೂ ನವನೀತ್ ಪರ ವಕೀಲ ಪ್ರದೀಪ್ ಕುಮಾರ್ ಎಸ್.ಬಿ. ಹಾಜರಿದ್ದರು. ತೀರ್ಪಿನ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ, ಡಿವೈಎಸ್ಪಿ ಶಿವಾನಂದ ನಾಯಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಪ್ರಕರಣದ ಹಿನ್ನೆಲೆ:
ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿದ್ದ ಭಾಸ್ಕರ್ ಶೆಟ್ಟಿ ಉಡುಪಿಯಲ್ಲಿ ಕೋಟ್ಯಂತರ ರೂ. ವೌಲ್ಯದ ಆಸ್ತಿಯನ್ನು ಹೊಂದಿದ್ದರು. ಆಸ್ತಿ ಹಾಗೂ ಅನೈತಿಕ ಸಂಬಂಧದ ವಿಚಾರದಲ್ಲಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಲು ಪತ್ನಿ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಸಂಚು ರೂಪಿಸಿದರು. ೨೦೧೬ರ ಜು. ೨೮ರಂದು ಮಧ್ಯಾಹ್ನ ೩ ಗಂಟೆಗೆ ಮನೆಯಲ್ಲಿ ಸ್ನಾನ ಮಾಡಿ ಬಾತ್‌ರೂಮಿನಿಂದ ಹೊರಗಡೆ ಬರುತ್ತಿದ್ದ ಭಾಸ್ಕರ್ ಶೆಟ್ಟಿಯ ಮುಖದ ಮೇಲೆ ಪೆಪ್ಪರ್ ಸ್ಪ್ರೆ ಹಾಕಿದ ಈ ಮೂವರು, ಕಬ್ಬಿಣದ ರಾಡಿನಿಂದ ತಲೆಯ ಮೇಲೆ ಹೊಡೆದು ನಂತರ ಕೀಟನಾಶಕ ಕುಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿದರು. ಬಳಿಕ ಅವರನ್ನು ತಮ್ಮ ಕಾರಿನ ಡಿಕ್ಕಿಯಲ್ಲಿ ಹಾಕಿ ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಗೆ ತೆಗೆದುಕೊಂಡು ಹೋದರು. ಅಲ್ಲಿ ಯಾಗ ಶಾಲೆಯಲ್ಲಿ ಕಲ್ಲುಗಳಿಂದ ಹೋಮ ಕುಂಡ ರಚಿಸಿ ಆ ಕುಂಡದಲ್ಲಿ ಭಾಸ್ಕರ್ ಶೆಟ್ಟಿಯ ದೇಹವನ್ನು ಇಟ್ಟು ಕರ್ಪೂರ, ತುಪ್ಪ, ಪೆಟ್ರೋಲ್‌ನಿಂದ ಸುಟ್ಟರು. ಮುಂದೆ ಎಲ್ಲ ಸಾಕ್ಷ್ಯಾಧಾರಗಳನ್ನು ನಾಶ ಮಾಡುವುದಕ್ಕಾಗಿ ನಿರಂಜನ ಭಟ್ ಹಾಗೂ ಆತನ ಕಾರು ಚಾಲಕ ರಾಘವೇಂದ್ರ ಯಾಗ ಶಾಲೆಯನ್ನು ನೀರಿನಿಂದ ತೊಳೆದು ಮೂಳೆಗಳನ್ನು ಹಾಗೂ ಹೋಮಕ್ಕೆ ಉಪಯೋಗಿಸಿದ ಕಲ್ಲುಗಳನ್ನು ನದಿಯಲ್ಲಿ ಎಸೆದಿದ್ದರು. ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ಸುಟ್ಟ ಜಾಗದ ಟೈಲ್ಸ್‌ಗಳನ್ನು ತೆಗೆದು ಹೊಸ ಟೈಲ್ಸ್‌ಗಳನ್ನು ಹಾಕಿದ್ದರು. ಜು.೨೯ರಂದು ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ, ತನ್ನ ಮಗ ಜು.೨೮ರಿಂದ ನಾಪತ್ತೆ ಯಾಗಿದ್ದಾನೆ ಎಂಬುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಂದ ಈ ಕೊಲೆಗೆ ಬೆಳಕಿಗೆ ಬಂತು. ಆ.೭ರಂದು ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್‌ನನ್ನು ಮತ್ತು ಆ.೮ರಂದು ನಿರಂಜನ್ ಭಟ್‌ನನ್ನು ಪೊಲೀಸರು ಬಂಧಿಸಿದರು. ಅದೇ ದಿನ ರಾತ್ರಿ ನಿರಂಜನ್ ಭಟ್ ಆತ್ಮಹತ್ಯೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದನು. ಸಂಘ ಸಂಸ್ಥೆಗಳ ಒತ್ತಾಯದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸರಕಾರ ಆ.೧೬ ರಂದು ಸಿಐಡಿ ತನಿಖೆಗೆ ಒಪ್ಪಿಸಿತು. ಸಿಐಡಿ ಪೊಲೀಸರು ಮೂರು ತಿಂಗಳ ಕಾಲ ತನಿಖೆ ನಡೆಸಿ ನ.೨ರಂದು ಪ್ರಾಥಮಿಕ ಹಂತದ ೧೩೦೦ಪುಟಗಳ ಚಾರ್ಜ್‌ಶೀಟ್ ಮತ್ತು ೨೦೧೭ರ ಜ.೨೫ರಂದು ೧೦೧ ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ೨೦೧೬ರ ಅ.೧ರಂದು ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ ಜಾಮೀನು ಪಡೆದಿದ್ದರು. ೨೦೧೮ರ ನ.೫ರಂದು ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಜಿಲ್ಲಾ ನ್ಯಾಯಾಲಯವು ರಾಜೇಶ್ವರಿಗೆ ಶರ್ತಬದ್ಧ ಜಾಮೀನು ಮಂಜೂರು ಮಾಡಿತ್ತು. ನ್ಯಾಯಾಲಯ ಆದೇಶ ನೀಡುತ್ತಿದ್ದಂತೆಯೇ ಕೋರ್ಟ್‌ನಲ್ಲಿ ಹಾಜರಿದ್ದ ರಾಜೇಶ್ವರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಬಳಿಕ ಆಕೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರು ಜೈಲಿಗೆ ಕರೆದುಕೊಂಡು ಹೋಗಲಾಯಿತು.