ಉದ್ಯಮಿ ಚಿನ್ನ ದೋಚಿದ್ದ ಓಜಿ ಕುಪ್ಪಂ ಗ್ಯಾಂಗ್ ಸೆರೆ

ಬೆಂಗಳೂರು,ನ.೨೯-ಕಾರಿನ ಟೈರ್ ಪಂಚರ್ ಆಗಿದೆ ಎಂದು ಉದ್ಯಮಿ ದಂಪತಿಯ ಗಮನ ಬೇರೆಡೆ ಸೆಳೆದು ಲಕ್ಷಾಂತರ ಮೌಲ್ಯದ ಚಿನ್ನ-ವಜ್ರಾಭರಣಗಳನ್ನು ದೋಚಿದ್ದ ಕುಖ್ಯಾತ ಓಜಿ ಕುಪ್ಪಂ ಗ್ಯಾಂಗ್ ನ ಖದೀಮನನ್ನು ಕೆಂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಓಜಿ ಕುಪ್ಪಂ ಗ್ಯಾಂಗ್ ನ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಗರಿ ಮಂಡಲಂನ ಗಿರಿಕುಮಾರ್ ಅಲಿಯಾಸ್ ಗಿರಿನ್‌ಕುಮಾರ್(೪೧) ಬಂಧಿತ ಆರೋಪಿಯಾಗಿದ್ದಾನೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.ಬಂಧಿತ ಆರೋಪಿಯಿಂದ ೨೫ ಲಕ್ಷ ಮೌಲ್ಯದ ವಜ್ರ ಚಿನ್ನ ಸೇರಿದಂತೆ ೪೪೯ ಗ್ರಾಂ ತೂಕದ ಆಭರಣಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಳೆದ ಅ.೨೧ ರಂದು ಉದ್ಯಮಿ ಕೆಂಗೇರಿಯ ರಾಜೇಶ್ ಶ್ರೀವಾಸ್ತವ್ ಅವರು ಕೆಂಗೇರಿಯ ಮೈಸೂರು ರಸ್ತೆಯಲ್ಲಿರುವ ಬಿಡಿಎ ಅಪಾರ್ಟ್ ಮೆಂಟ್ ಹತ್ತಿರ ಪತ್ನಿ ಜೊತೆ ಕಾರನ್ನು ನಿಲ್ಲಿಸಿಕೊಂಡು ನಿಂತಿರುವಾಗ ಬಂದ ಆರೋಪಿಯು ಕಾರಿನ ಟೈರ್ ಪಂಚರ್ ಆಗಿದೆ ಎಂದು ಗಮನವನ್ನು ಬೇರೆಡೆಗೆ ಸೆಳೆದು ಕಾರಿನಲ್ಲಿದ್ದ ಸುಮಾರು ೪೦೦ ರಿಂದ ೫೦೦ ತೂಕದ ಚಿನ್ನ ವಜ್ರಾಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ.

ಈ ಸಂಬಂಧ ನೀಡಿದ ದೂರು ಆಧರಿಸಿ ದಾಖಲಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೊಂಡ ಕೆಂಗೇರಿ ಪೊಲೀಸ್ ಇನ್ಸ್‌ಪೆಕ್ಟರ್ ಸಂಜೀವೇಗೌಡ ಮತ್ತವರ ಸಿಬ್ಬಂದಿ ಚಿನ್ನ,ವಜ್ರಾಭರಣಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.ಆರೋಪಿಯು ಕುಖ್ಯಾತ ಓಜಿ ಕುಪ್ಪಂ ಗ್ಯಾಂಗ್ ಖದೀಮನಾಗಿದ್ದು ನಗರದ ಹಲವೆಡೆ ಗಮನ ಬೇರೆಡೆ ಸೆಳೆದು ಲಕ್ಷಾಂತರ ಮೌಲ್ಯದ ಚಿನ್ನ,ವಜ್ರ,ಬೆಳ್ಳಿ, ಲ್ಯಾಪ್‌ಟಾಪ್,ಮೊಬೈಲ್ ಕಳವು ಮಾಡುತ್ತಿದ್ದು ಹಲವು ಬಾರಿ ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದೇ ಕಳ್ಳತನ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ಎಂದರು.