ಉದ್ಯಮಿಯ ಮೇಲೆ ತಲವಾರು ದಾಳಿ

ಮಂಗಳೂರು, ನ.೧೭- ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾವರ ಬಳಿ ರವಿವಾರ ರಾತ್ರಿ ಉದ್ಯಮಿಯೊಬ್ಬರ ಮೇಲೆ ತಲವಾರು ದಾಳಿ ನಡೆದಿದೆ.
ಕಂದಾವರ ಕೈಕಂಬದ ಅಬ್ದುಲ್ ಅಝೀಝ್ (೫೬) ದಾಳಿಗೊಳಗಾದ ಉದ್ಯಮಿ. ಮಂಗಳೂರಿನಲ್ಲಿ ವೆನ್ಝ್ ಬಟ್ಟೆಬರೆ ಅಂಗಡಿ ಹೊಂದಿರುವ ಅಝೀಝ್ ಕಂದಾವರ ಮಸೀದಿಯ ಆಡಳಿತ ಕಮಿಟಿಯಲ್ಲೂ ಸಕ್ರಿಯರಾಗಿದ್ದರು. ರಾತ್ರಿ ಸುಮಾರು ೧೦:೩೦ ಗಂಟೆಗೆ ಅಝೀಝ್ ಮಸೀದಿಯಲ್ಲಿ ನಮಾಝ್ ಮಾಡಿ ತಮ್ಮ ನಿವಾಸಕ್ಕೆ ವಾಪಸ್ ಆಗಲು ತನ್ನ ಕಾರು ಇರಿಸಿದ್ದ ಜಾಗಕ್ಕೆ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಇಬ್ಬರು ಯುವಕರು ಅಝೀಝ್ ಅವರ ತಲೆ, ಕೈ, ಕಾಲಿಗೆ ತಲವಾರಿನಿಂದ ದಾಳಿ ನಡೆಸಿದ್ದು ಬಳಿಕ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇನ್ನು ಈ ದಾಳಿಯು ವೈಯಕ್ತಿಕ ದ್ವೇಷದಿಂದ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಗಾಯಗೊಂಡ ಅಝೀಝ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.