ಉದ್ಯಮಿಗಳ ಸಾಲ ಮನ್ನಾ, ಜನರಿಗೆ ಜಿಎಸ್‌ಟಿ ಬರೆ ಕೇಂದ್ರದ ಸಾಧನೆ: ರಾಮಲಿಂಗಾರೆಡ್ಡಿ

ಕುಣಿಗಲ್, ಜು. ೨೪- ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ ವಿರೋಧಿ ಆಡಳಿತ ನಡೆಸುತ್ತಾ ಅಂಬಾನಿ ಹಾಗೂ ಅದಾನಿಯ ೧೨೫೦೦ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ರಾಮಲಿಂಗ ರೆಡ್ಡಿ ಆರೋಪಿಸಿದರು.
ತಾಲ್ಲೂಕಿನ ಕೊತ್ತಗೆರೆ ಹೋಬಳಿ ಗಿಡದಪಾಳ್ಯದಲ್ಲಿ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯದ ೭೫ ನೇ ವರ್ಷದ ವರ್ಷಾಚರಣೆ ಅಂಗವಾಗಿ ಶಾಸಕ ಡಾ. ಎಚ್.ಡಿ. ರಂಗನಾಥ್ ನೇತೃತ್ವದ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷವು ೭೫ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಂಡು ಕಾಂಗ್ರೆಸ್ ಪಕ್ಷವು ದೇಶದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ, ಕಾಂಗ್ರೆಸ್ ಪಕ್ಷದ ಕೊಡುಗೆ, ಇತಿಹಾಸವನ್ನು ಪ್ರತಿ ಹಳ್ಳಿಯ ಯುವ ಜನತೆಗೆ ತಿಳಿಸುವುದರೊಂದಿಗೆ ಈ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವ ನಡಿಗೆ ಇದಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಎಂಟು ವರ್ಷದ ಆಡಳಿತದಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಯುವಕರನ್ನು ನಿರುದ್ಯೋಗದೆಡೆಗೆ ತಳ್ಳಿದ್ದಾರೆ. ಕಪ್ಪು ಹಣ ವಾಪಸ್ ತರುತ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡಿ ಸಾಮಾನ್ಯ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ರೈತ ವಿರೋಧಿ ನೀತಿ, ಜನಸಾಮಾನ್ಯರ ವಿರೋಧಿ ಆಡಳಿತ ನಡೆಸುತ್ತಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತದಲ್ಲಿ ೫೩,೦೦೦ ಕೋಟಿ ಸಾಲ ಮಾಡಿದರೆ ಬಿಜೆಪಿ ಸರ್ಕಾರವು ಎಂಟು ವರ್ಷದಲ್ಲಿ ೧೦ ಲಕ್ಷ ಕೋಟಿ ಸಾಲ ಮಾಡಿದೆ ಎಂದು ಟೀಕಿಸಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕನ ತಲೆಯ ಮೇಲೆ ೧.೭೫ ಲಕ್ಷ ಸಾಲ ಇದೆ ಎಂದರು. ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಗ್ರಾಮಾಂತರ ಪ್ರದೇಶಗಳಿಗೆ ಕೊಂಡೊಯ್ಯಲು ಶಾಸಕ ಡಾ. ಎಚ್.ಡಿ.ರಂಗನಾಥ್ ೨೦೦ ಕಿಲೋ ಮೀಟರ್ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಸಾಧನೆ ಕುರಿತು ಜನಜಾಗೃತಿ ಮೂಡಿಸಲಿದ್ದಾರೆ ಎಂದರು.
ಬಿಜೆಪಿಯ ಸರ್ಕಾರವು ಬಡವರು, ರೈತರ ಹಾಲು, ಮೊಸರು, ಮಜ್ಜಿಗೆ, ತುಪ್ಪ ಸೇರಿದಂತೆ ದಿನನಿತ್ಯದ ವಸ್ತುಗಳ ಮೇಲೆ ಜಿಎಸ್‌ಟಿ ಹಾಕಿದೆ. ಆರೂವರೆ ಕೋಟಿ ಜನರ ಮೇಲೆ ವಿವಿಧ ತೆರಿಗೆಯನ್ನು ವಿಧಿಸಿರುವುದು ಇವರ ಸಾಧನೆಯಾಗಿದೆ ಎಂದು ದೂರಿದರು.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದ ೫೭೦ ಮುಖಂಡರ ಮೇಲೆ ಐಟಿ, ಇ.ಡಿ, ಸಿ.ಬಿ.ಐ ದಾಳಿಗಳನ್ನು ಮಾಡಿ ಕೇಸ್ ದಾಖಲು ಮಾಡುತ್ತಾ ಬೆದರಿಕೆ ಉಂಟು ಮಾಡುತ್ತಿದ್ದಾರೆ. ಇಂತಹ ಯಾವುದೇ ದಾಳಿಗೆ ಕಾಂಗ್ರೆಸ್ ಪಕ್ಷವು ಕಾನೂನಾತ್ಮಕ ಹೋರಾಟ ನಡೆಸಿ ತಕ್ಕ ಉತ್ತರ ನೀಡಲಿದೆ ಎಂದರು.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲಿದ್ದು, ತದ ನಂತರ ಈ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಎಲ್ಲಾ ಶಾಸಕರು ಪಕ್ಷದ ಹೈಕಮಾಂಡ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ ಎಂದರು.
ಶಾಸಕ ಡಾ. ಎಚ್.ಡಿ. ರಂಗನಾಥ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್ ಆದೇಶದಂತೆ ಕ್ಷೇತ್ರಾದ್ಯಂತ ಸ್ವಾತಂತ್ರ್ಯ ನಡಿಗೆಯನ್ನು ಪಕ್ಷಾತೀತವಾಗಿ ಕೈಗೊಂಡು ಜನಸಾಮಾನ್ಯರಲ್ಲಿ ಜಾಗೃತಿ ಉಂಟು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪಾದಯಾತ್ರೆಯಲ್ಲಿ ಆಡಿಟರ್ ನಾಗರಾಜು, ಕೆಂಪೀರೇಗೌಡ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅನುಸೂಯಮ್ಮ, ವೈ.ಕೆ. ರಾಮಯ್ಯ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ವಿಶ್ವನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಗಣ್ಣಗೌಡ, ವೆಂಕಟರಾಮು, ಪುರಸಭಾ ಸದಸ್ಯರಾದ ಅರುಣ್ ಕುಮಾರ್, ಶ್ರೀನಿವಾಸ್, ಕೋಘಟ್ಟ ರಾಜಣ್ಣ, ಕಾಂಗ್ರೆಸ್ ಉಸ್ತುವಾರಿ ಸುಧಾಕರ್, ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.