ಉದ್ಯಮಿಗಳ ವಿರುದ್ಧ ನಗರ ಪಾಲಿಕೆಯ ಅತಿರೇಕದ ಕ್ರಮ ಖಂಡನೀಯ

ಮೈಸೂರು, ನ.12:- ಆಸ್ತಿ ತೆರಿಗೆ ಪಾವತಿಸಿಲ್ಲದ ಉದ್ಯಮಿಗಳ ವಿರುದ್ಧ ನಗರಪಾಲಿಕೆಯು ಕೈಗೊಳ್ಳುತ್ತಿರುವ ಅತಿರೇಕದ ಕ್ರಮಗಳನ್ನು, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟವು ತೀವ್ರವಾಗಿ ಖಂಡಿಸಿದೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಮಾತನಾಡಿ ಮೈಸೂರು ಮಹಾನಗರ ಪಾಲಿಕೆಯು ಆಸ್ತಿ ತೆರಿಗೆ ಹಾಗೂ ಉದ್ದಿಮೆ ರಹದಾರಿ ಶುಲ್ಕ ಪಾವತಿ ಮಾಡದ ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು, ಕಲ್ಯಾಣ ಮಂಟಪಗಳು ಮತ್ತು ಇತರ ವಾಣಿಜ್ಯ ಕಟ್ಟಡಗಳ ಮೇಲೆ ಬೋರ್ಡುಗಳನ್ನು ಅಂಟಿಸುತ್ತಿರುವುದು ಹಾಗೂ ಅವರಿಗೆ ಅವಮಾನ ಮಾಡುತ್ತಿರುವುದು ಇಡೀ ನಗರದಲ್ಲಿ ಕಂಡುಬರುತ್ತಿದೆ. ಮೈಸೂರು ಮಹಾನಗರ ಪಾಲಿಕೆ ಈ ನಡೆಯನ್ನು ಖಂಡಿಸುತ್ತೇವೆ ಎಂದರು.
ಆಸ್ತಿ ತೆರಿಗೆ ಹಾಗೂ ಉದ್ದಿಮೆ ರಹದಾರಿಗೆ ಸಂಬಂಧಿಸಿದಂತೆ ಮೈಸೂರಿನ ಉದ್ಯಮಿಗಳಿಗೆ ಹಲವು ಗೊಂದಲಗಳಿವೆ, ತೊಂದರೆಗಳಿವೆ. ಇದನ್ನು ನಗರಪಾಲಿಕೆ ಅಧಿಕಾರಿಗಳೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಈಗಾಗಲೇ ಬಹಳಷ್ಟು ಬಾರಿ ಚರ್ಚಿಸಲಾಗಿದೆ, ಆದರೆ ಅವರು ಸರಿಯಾಗಿ ಸ್ಪಂದಿಸಿಲ್ಲ. ಕೆಲವು ದಿನಗಳಲ್ಲಿ ನಮ್ಮೊಂದಿಗೆ ಸಭೆ ಮಾಡುವುದಾಗಿ ತಿಳಿಸಿದ್ದರು. ಅದಕ್ಕೂ ಮುನ್ನವೇ ಈ ರೀತಿ ಕ್ರಮ ಕೈಗೊಂಡು ಉದ್ಯಮಿಗಳಿಗೆ ಅವಮಾನ ಮಾಡುತ್ತಿರುವುದು ಬಹಳ ತಪ್ಪು ಎಂದು ಕಿಡಿಕಾರಿದರು.
ತೆರಿಗೆ ಶುಲ್ಕ, ಉದ್ದಿಮೆ ರಹದಾರಿ ಶುಲ್ಕ ಪಾವತಿಸುತ್ತಿಲ್ಲವಾದರೆ ನೋಟಿಸ್ ಕೊಡಬೇಕು, ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು, ಅದನ್ನು ಬಿಟ್ಟು ಈ ರೀತಿಯ ಬೋರ್ಡುಗಳನ್ನು ಅಂಟಿಸುವುದು, ಅವಮಾನ ಮಾಡುವುದು, ಹೆ ೂೀಟೆಲ್‍ಗಳು, ರೆಸ್ಟೋರೆಂಟ್‍ಗಳು, ಕಲ್ಯಾಣ ಮಂಟಪಗಳು ಮತ್ತು ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸುವುದು ಸರಿಯಾದ ನಡೆಯಲ್ಲ. ಮೈಸೂರು ಮಹಾನಗರ ಪಾಲಿಕೆಯು ಈ ಕೂಡಲೇ ಇಂತಹ ಕ್ರಮಗಳನ್ನು ಕೈಗೊಳ್ಳುವುದನ್ನು ನಿಲ್ಲಿಸಬೇಕು. ಕಾನೂನು ರೀತಿಯಲ್ಲಿ ತಿಳಿಹೇಳಿ ಎಲ್ಲರನ್ನೂ ವಿಶ್ವಾಸದಿಂದ ನಡೆಸಿಕೊಂಡು ಹೋಗಬೇಕು. ಇಲ್ಲವಾದಲ್ಲಿ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟವು ಇಡೀ ನಗರದ ಉದ್ಯಮಿಗಳ ಪರವಾಗಿ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ನಾರಾಯಣ ಗೌಡ, ಸತ್ಯನಾರಾಯಣ್ ಕೆ.ಆರ್ ಮತ್ತಿತರರು ಉಪಸ್ಥಿತರಿದ್ದರು.