ಉದ್ಯಮಿಗಳು ಸಾಮಾಜಿಕ ಪರಿಣಾಮಗಳತ್ತಲೂ ಗಮನಹರಿಸಿ: ಸಿಎಂ

ಹುಬ್ಬಳ್ಳಿ,ಜು17: ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣಗಳ ನಡುವೆ ಅಂತಃಕರಣ ಪುನಃ ಸ್ಥಾಪನೆಯಾಗಬೇಕು.ಉದ್ಯಮಿಗಳು ಲಾಭ ನಷ್ಟದ ಜೊತೆಗೆ ಸಮಾಜದ ಮೇಲೆ ಉಂಟಾಗುವ ಪರಿಣಾಮಗಳನ್ನೂ ಅರಿತು ಹೆಜ್ಜೆಯಿಡಬೇಕು. ಕೈಗಾರಿಕೆಗಳ ಉತ್ತೇಜನಕ್ಕೆ ತೆರಿಗೆ ಪದ್ಧತಿ ಸರಳೀಕರಣಗೊಳಿಸಲು ಸ್ವಯಂ ತೆರಿಗೆ ಪದ್ಧತಿ ಜಾರಿಗೊಳಿಸಲಾಗುವುದು.ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರ ಆರ್ ಆಂಡ್ ಡಿ ನೀತಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಖಾಸಗಿ ಹೋಟೆಲಿನಲ್ಲಿ ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಯೋಜಿಸಿದ್ದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
21 ನೇ ಶತಮಾನದಲ್ಲಿ ಕೈಗಾರಿಕಾ ರಂಗದಲ್ಲಿ ಮತ್ತೊಮ್ಮೆ ಮಹತ್ತರ ಬದಲಾವಣೆಗಳಾಗುತ್ತಿವೆ.ರಾಜ್ಯದಲ್ಲಿಯೂ ತೆರಿಗೆ ಸರಳೀಕರಣ ಮಾಡಿ, ಸ್ವಯಂ ಘೋಷಿತ ತೆರಿಗೆ ಪದ್ಧತಿ ಜಾರಿಗೊಳಿಸಲಾಗುವುದು.ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಿ ಫಿಟ್‍ಮೆಂಟ್ ಅಂತಿಮಗೊಳಿಸಲಾಗುವುದು. ಹಿಂದೆಂದಿಗಿಂತಲೂ ಇಂದು ಉದ್ಯಮಶೀಲತೆ ಬಹಳ ಮುಖ್ಯವಾಗಿದೆ. ಕೈಗಾರಿಕಾ ಮತ್ತು ವಾಣಿಜ್ಯದ ಪರಿಭಾಷೆ,ಸರ್ಕಾರದ ಚಿಂತನೆ ಎರಡೂ ಬದಲಾಗಿವೆ.ಜಾಗತೀಕರಣ ಮುಕ್ತ ಆರ್ಥಿಕ ನೀತಿಗಳು ನೇರವಾಗಿ ಜನಸಾಮಾನ್ಯನ ಮೇಲೆ ಪರಿಣಾಮ ಬೀರಿವೆ.ನಮ್ಮ ಎಲ್ಲಾ ನಿರ್ಣಯಗಳ ಹಿಂದೆ ಲಾಭ,ನಷ್ಟದ ಉದ್ದೇಶ ಮಾತ್ರವಲ್ಲದೇ ಸಾಮಾಜಿಕ ದೃಷ್ಟಿಯ ಅರಿವು ಸ್ಪಷ್ಟವಾಗಿರಬೇಕು.ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರಗಳು ಪರಸ್ಪರ ಪೂರಕವಾಗಿ ಸಾಗಬೇಕು.ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭೆ ಇದೆ,ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಿ ಪ್ರತಿಭೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬೃಹತ್ ಮತ್ತು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ,ಕೃಷಿ ಸಚಿವ ಬಿ.ಸಿ.ಪಾಟೀಲ, ಕೈಮಗ್ಗ ,ಜವಳಿ ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ,ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ,ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ,ಎಫ್‍ಕೆಸಿಸಿಐ ಅಧ್ಯಕ್ಷ ಡಾ.ಐ.ಎಸ್.ಪ್ರಸಾದ,ಕೆಸಿಸಿಐ ಅಧ್ಯಕ್ಷ ವಿನಯ್ ಜವಳಿ ಸೇರಿದಂತೆ ವಾಣಿಜ್ಯೋದ್ಯಮ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.