ಉದ್ಯಮಿಗಳಿಗೆ ಐಟಿ ಶಾಕ್

ಬೆಂಗಳೂರು,ಏ.೧೯- ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳಿರುವಾಗ ನಗರದ ಹಲವೆಡೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಉದ್ಯಮಿಗಳಿಗೆ ಶಾಕ್ ನೀಡಿದ್ದಾರೆ.
ನಗರದ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಚುನಾವಣೆಗೆ ಹಣ ಸಾಗಾಟ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷದ ಜತೆ ಗರುತಿಸಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮನೆ ಮೇಲೆ ಐಟಿ ಅಧಿಕಾರಿಗಳು ನೆಲಮಂಗಲದಲ್ಲಿ ಕೆಲವು ದಿನಗಳ ಹಿಂದೆ ದಾಳಿ ಮಾಡಿದ್ದರು. ೬ ಕಾರುಗಳಲ್ಲಿ ಬಂದ ೨೦ ಐಟಿ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸಿತ್ತು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಆಪ್ತ ಕನಕಪುರ ಕೆಂಪರಾಜು ಮನೆ ಮೇಲೆ ಕೂಡ ಕೆಲವು ದಿನಗಳ ಹಿಂದೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಡಿಕೆ ಸುರೇಶ್ ಅವರ ಮತ್ತೊಬ್ಬ ಆಪ್ತನ ಮನೆ ಮೇಲೆ ಬೆಂಗಳೂರಿನ ವಾಜರಹಳ್ಳಿಯಲ್ಲಿ ಐಟಿ ದಾಳಿ ನಡೆದಿತ್ತು.
ಧಾರವಾಡದ ದಾಸನಕೊಪ್ಪ ಕ್ರಾಸ್ ಬಳಿಯ ಅರ್ನಾ ರೆಸಿಡೆನ್ಸಿಯ ಮೂರನೇ ಮಹಡಿಯಲ್ಲಿರುವ ಬಸವರಾಜ್ ದತ್ತನವರ್ ಎನ್ನುವರ ಪ್ಲಾಟ್ ನಂ ೩೦೩ರ ನಿವಾಸದ ಮೇಲೆ ಮಂಗಳವಾರ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, ಬರೋಬ್ಬರಿ ೧೮ ಕೋಟಿ ರೂ. ನಗದು ವಶಕ್ಕೆ ಪಡೆದುಕೊಂಡಿದ್ದರು