ಉದ್ಯಮಸ್ನೇಹಿ ಕೈಗಾರಿಕಾ ನೀತಿಗಳು ಜಾರಿಗೊಳ್ಳಲಿ

ಕಲಬುರಗಿ:ಜ.17: ಅನೇಕ ಯುವಕರು ಸರ್ಕಾರಿ ನೌಕರಿಗಾಗಿಯೇ ವಯಸ್ಸು ಸವೆಸಿ, ನೌಕರಿ ದೊರೆಯದೆ ನಿರುದ್ಯೋಗಿಗಳಾಗುತ್ತಿದ್ದಾರೆ. ಸರ್ಕಾರ ಎಲ್ಲರಿಗೂ ನೌಕರಿ ನೀಡಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು, ನೀವು ಸೂಕ್ತ ತರಬೇತಿ, ಅನುಭವ ಪಡೆದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ, ಉದ್ಯಮಪತಿಯಾಗಿ ಉದ್ಯೋಗವನ್ನು ನೀಡುವ ಕಾರ್ಯ ಮಾಡಬೇಕು. ಸರ್ಕಾರ ಉದ್ಯಮಿಸ್ನೇಹಿ ನೀತಿ-ನಿಯಮ, ಯೋಜನೆಗಳನ್ನು ಜಾರಿಗೊಳಿಸಬೇಕು. ಜ್ಞಾನ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿ ಸೂಕ್ತ ಮಾರ್ಗದರ್ಶನ ಮಾಡಬೇಕು. ಉದ್ಯಮಗಳ ಸ್ಥಾಪನೆಗೆ ಪೂರಕ ವಾತಾವರಣ ಸೃಷ್ಟಿಸುವುದು ಪ್ರಸ್ತುತ ಅಗತ್ಯವಾಗಿದೆ ಎಂದು ಎಚ್‍ಕೆಸಿಸಿಐ ಮಾಜಿ ಅಧ್ಯಕ್ಷ ಅಮರನಾಥ ಪಾಟೀಲ ಹೇಳಿದರು.

     ನಗರದ ಗಾಜಿಪುರ ಬಡಾವಣೆಯಲ್ಲಿರುವ ಕಾಶಿಯಾ ವಿಭಾಗೀಯ ಕಚೇರಿಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ 'ದ್ವಿತೀಯ ರಾಷ್ಟ್ರೀಯ ನವೋದ್ಯಮ ದಿನಾಚರಣೆ'ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
    ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ(ಕಾಶಿಯಾ)ದ ಗ್ರಾಮೀಣ ಪ್ರದೇಶದ ಜಂಟಿ-ಕಾರ್ಯದರ್ಶಿ ಭೀಮಾಶಂಕರ ಬಿ.ಪಾಟೀಲ ಮಾತನಾಡುತ್ತಾ, ನಮ್ಮ ಭಾಗದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗಬೇಕಾಗಿದೆ. ಸರ್ಕಾರದ ಯೋಜನೆಗಳು, ಬ್ಯಾಂಕ್ ಸಾಲದ ಮಾಹಿತಿ ಪಡೆಯಬೇಕು. ಸರ್ಕಾರದ ಸೌಲಭ್ಯಗಳಿಂದ ಪಡೆದ ಆರ್ಥಿಕ ಸಹಾಯ ಅನಾವಶ್ಯಕವಾಗಿ ವೆಚ್ಚ ಮಾಡದೆ, ನಿರಂತರವಾಗಿ ಶ್ರಮ ಹಾಕಿ, ಸಮಯ ಮತ್ತು ಕಾಯಕ ಪ್ರಜ್ಞೆಯಿಂದ, ನಿಮ್ಮ ಸಾಮಥ್ರ್ಯ ಅರಿತು, ಯೋಜನಾಬದ್ದತೆಯಿಂದ ಕಾರ್ಯನಿರ್ವಹಿಸಬೇಕು. ನಮ್ಮ ಭಾಗದಲ್ಲಿ ಇಲ್ಲಿಯವರೆಗೆ 180 ಜನ ಉದ್ಯಮಿಗಳಿಗೆ ಆಮದು-ರಫ್ತು ಲೈಸೆನ್ಸ್ ದೊರಕಿಸಿಕೊಡಲು ಕಾಶಿಯಾ ಸಹಕಾರ ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ, ಡಾ.ಸುನೀಲಕುಮಾರ ಎಚ್.ವಂಟಿ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಚಿತ್ರಶೇಖರ ತೆಗನೂರ್, ರಾಜಶೇಖರ ಪಾಟೀಲ, ಮಹೇಶ ಬಿರಾದಾರ ಸೇರಿದಂತೆ ಮತ್ತಿತರರಿದ್ದರು.