ಉದ್ಯಮಶೀಲತೆಯಲ್ಲಿ ಮಹಿಳೆಗೆ ನಾಯಕತ್ವ ಸಿಗುವಂತೆ ಮಾಡಬೇಕುಃ ಪ್ರೊ.ಬಿ.ಕೆ.ತುಳಸಿಮಾಲ

ವಿಜಯಪುರ, ಮಾ.19-ವಿದ್ಯಾರ್ಥಿಗಳ ಪ್ರಗತಿ, ಉನ್ನತಿ ಮತ್ತು ಉದ್ಯಮ ಶೀಲತೆಯೇ ಪ್ರತಿಯೊಂದು ವಿಶ್ವವಿದ್ಯಾನಿಲಯದ ಪ್ರಮುಖ ಧ್ಯೇಯವಾಗಿರುತ್ತದೆ. ಉದ್ಯಮಶೀಲತೆಯಲ್ಲಿ ಮಹಿಳೆಗೆ ನಾಯಕತ್ವ ಸಿಗುವಂತೆ ಮಾಡಬೇಕು ಎಂದು ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಭವನದಲ್ಲಿ, ಉದ್ಯೋಗ ಮತ್ತು ವೃತ್ತಿ ಸಮಾಲೋಚನ ಕೋಶ, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಘಟಕ ಮತ್ತು ಬೆಂಗಳೂರಿನ ಟೆಕ್ಸಾಕ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಉದ್ಯಮಶೀಲತೆಯ ಬೆಳವಣಿಗೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿ ಇಂದಿನ ದಿನಮಾನಗಳಲ್ಲಿ ಉದ್ಯಮಶೀಲಗಳಲ್ಲಿ ಶೇ.20% ರಷ್ಟು ಮಾತ್ರ ಮಹಿಳೆ ತೊಡಗಿದ್ದಾಳೆ. ಉದ್ಯಮಶೀಲಗಳಲ್ಲಿ ಮಹಿಳೆಗೆ ಇಲ್ಲಯವೆರೆಗೂ ನಾಯಕತ್ವ ಸಿಕ್ಕಿಲ್ಲ ಎಂದರು.
ಇವತ್ತಿನ ದಿನ ಮಹಿಳೆಗೆ ಹಲವಾರು ಅವಕಾಶಗಳು ಇವೆ. ಇದನ್ನು ಗುರುತಿಸಲು ಆಗುತ್ತಿಲ್ಲ. ಅದಲ್ಲದೆ ಗ್ರಾಮೀಣ ಮಹಿಳೆಯರು ತುಂಬಾ ಚಿಕ್ಕ ಪುಟ್ಟ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಉದ್ಯಮ ಪ್ರಾರಂಭ ಮಾಡಬೇಕಾದರೆ ಶಿಸ್ತು ಅತ್ಯವಶ್ಯಕವಾಗಿದ್ದು, ಅದನ್ನು ಹೇಗೆ ಅಳವಡಿಸಿಕೊಳ್ಳಬೇಕೆಂಬುದನ್ನು ಅರಿತಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯ ಡಾ.ಎಚ್.ವೆಂಕಟೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಟೆಕ್ಸಾಕ್‍ನ ತಾಂತ್ರಿಕ ಸಲಹೆಗಾರ ನಾಗರಾಜ, ಟೆಕ್ಸಾಕ್ ಸದಸ್ಯ ಡಾ.ಸಂಜೀವಕುಮಾರ ಶರ್ಮಾ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಘಟಕದ ನಿರ್ದೇಶಕಿ ಡಾ.ಅನಿತಾ ನಾಟೀಕರ, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕ ಡಾ.ಸಕ್ಪಾಲ್ ಹೂವಣ್ಣ ಉಪಸ್ಥಿತರಿದ್ದರು.
ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥನಾಗೀತೆ ಹಾಡಿದರು. ಉದ್ಯೋಗ ಮತ್ತು ವೃತ್ತಿ ಸಮಾಲೋಚನಾ ಕೋಶ ವಿಭಾಗದ ಸಂಯೋಜಕ ಡಾ.ವಿಷ್ಣು ಎಂ. ಶಿಂಧೆ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಜಾಯ್ ಹೊಸಕೇರಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಸಕ್ಪಾಲ್ ಹೂವಣ್ಣ ವಂದಿಸಿದರು.