ಉದ್ಯಮಶೀಲತಾ ಪ್ರೇರಣಾ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ,ನ.18:ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ ಹಾಗೂ ಕ್ಯಾಡ್‍ಮ್ಯಾಕ್ಸ್ ಸಲ್ಯೂಷನ್ಸ್ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿಯಲ್ಲಿ ಏರ್ಪಡಿಸಲಾಗಿದ್ದ 3 ದಿನಗಳ ಉದ್ಯಮಶೀಲತಾ ಪ್ರೇರಣಾ ಕಾರ್ಯಕ್ರಮವನ್ನು ಕಲಬುರಗಿ ಕೌಶಲ್ಯಾಭಿವೃದ್ಧಿ ಪ್ರಾದೇಶಿಕ ನಿರ್ದೇಶಕ ಮಲ್ಲಿಕಾರ್ಜುನ ಎಸ್. ಕೆ. ಅವರು ಮಂಗಳವಾರ ಉದ್ಘಾಟಿಸಿದರು.

   ಕಾರ್ಯಕ್ರಮದಲ್ಲಿ ರಾಯಚೂರ ಸಿಡಾಕ್ ಜಂಟಿ ನಿರ್ದೇಶಕ  ಜಿ.ಯು. ಹುಡೇದ  ಅವರು   ಸ್ವಯಂ ಉದ್ಯಮಗಳ ಸ್ಥಾಪನೆ ಮಾಡುವ ವಿಧಾನ, ಸ್ವಯಂ ಉದ್ಯೋಗಕ್ಕೆ ಇರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದಲ್ಲದೇ  ಕಲಬುರಗಿಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕೌಶಲ್ಯ ತರಬೇತಿಯನ್ನು ಪಡೆಯುತ್ತಿದ್ದು, ಇದರಲ್ಲಿ  60 ಜನರಿಗೆ ಸ್ವಯಂ ಉದ್ಯೋಗ ಸ್ಥಾಪನೆಗಾಗಿ ಪ್ರೇರಣಾ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ  ಸದುಪಯೋಗ ಪಡೆದುಕೊಳ್ಳಬೇಕು ಎಂದರು. 
  ಸಮಾರಂಭದಲ್ಲಿ ಕಲಬುರಗಿ ಸಿಡಾಕ್ ಫ್ಯಾಕಲ್ಟಿ ಆಂಡ್ ಕನ್ಸ್‍ಲ್ಟಂಟ್ ಸೈಯದ್ ಆಷ್ಫಕ್ ಸ್ವಾಗತಿಸಿದರು. ಸಿಡಾಕ್ ತರಬೇತುದಾರರಾದ  ಜಯಶ್ರೀ ಎಸ್. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕಲಬುರಗಿ ಸಿಡಾಕ್ ತರಬೇತಿದಾರ ಕು. ಮಾಧುರಿ ಮಾನಕರ್ ವಂದಿಸಿದರು.