ಉದ್ಯಮಗಳ ಸ್ಥಾಪನೆಗೆ ಪೂರಕ ವಾತಾವರಣ ಸೃಷ್ಟಿಸುವುದು ಅಗತ್ಯ

ಕಲಬುರಗಿ:ಜ.16: ಅನೇಕ ಯುವಕರು ಸರ್ಕಾರಿ ನೌಕರಿಗಾಗಿಯೇ ವಯಸ್ಸು ಸವೆಸಿ, ನೌಕರಿ ದೊರೆಯದೆ ನಿರುದ್ಯೋಗಿಗಳಾಗುತ್ತಿದ್ದಾರೆ. ಸರ್ಕಾರ ಎಲ್ಲರಿಗೂ ನೌಕರಿ ನೀಡಲು ಸಾಧ್ಯವಿಲ್ಲ. ಆದ್ದರಿಂದ ನಿರುದ್ಯೋಗಿಗಳು ಸೂಕ್ತ ತರಬೇತಿ, ಕೌಶಲಗಳನ್ನು ಪಡೆದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ, ಉದ್ಯಮಪತಿಯಾಗಿ ಉದ್ಯೋಗವನ್ನು ನೀಡುವ ಕಾರ್ಯ ಮಾಡಬೇಕು. ಸರ್ಕಾರದ ಉದ್ಯಮಿಸ್ನೇಹಿ ನೀತಿ-ನಿಯಮಗಳು, ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಉದ್ಯಮಗಳ ಸ್ಥಾಪನೆಗೆ ಪೂರಕ ವಾತಾವರಣ ಸೃಷ್ಟಿಸುವುದು ಪ್ರಸ್ತುತ ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಸಂಜೆ ಏರ್ಪಡಿಸಲಾಗಿದ್ದ ‘ತೃತೀಯ ರಾಷ್ಟ್ರೀಯ ಸ್ಟಾರ್ಟ್-ಅಪ್ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ನಮ್ಮ ಭಾಗದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗಬೇಕಾಗಿದೆ. ಸರ್ಕಾರದ ಯೋಜನೆಗಳು, ಬ್ಯಾಂಕ್ ಸಾಲದ ಮಾಹಿತಿ ಪಡೆಯಬೇಕು. ಸರ್ಕಾರದ ಸೌಲಭ್ಯಗಳಿಂದ ಪಡೆದ ಆರ್ಥಿಕ ಸಹಾಯ ಅನಾವಶ್ಯಕವಾಗಿ ವೆಚ್ಚ ಮಾಡದೆ, ನಿರಂತರವಾಗಿ ಶ್ರಮ ಹಾಕಿ, ಸಮಯ ಮತ್ತು ಕಾಯಕ ಪ್ರಜ್ಞೆಯಿಂದ, ನಿಮ್ಮ ಸಾಮಥ್ರ್ಯ ಅರಿತು, ಯೋಜನಾ ಬದ್ದತೆಯಿಂದ ಕಾರ್ಯನಿರ್ವಹಿಸಬೇಕು. ಆಗ ನಿಮ್ಮ ಉದ್ಯಮ ಯಶಸ್ಸುಯಾಗಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸೈಯದ್ ಹಮೀದ್ ಹುಸೇನ್, ಸೋಹೆಲ್ ಶೇಖ್, ಸಮೀರ್ ಮುಜಾವರ್, ವಿನಾಯಕ ಹಿರೇಮಠ, ಆದರ್ಶ ತಿವಾರಿ, ಶಿವಕುಮಾರ ಕಂಠಿಕಾರ, ಸುಲೇಮಾನ್ ಶೇಖ್, ಅಸದ್ ಎ.ಶೇಖ್ ಹಾಗೂ ಇನ್ನಿತರರಿದ್ದರು.