ಉದ್ಧವ್-ದೇಶ್‌ಮುಖ್ ಮಹತ್ವದ ಚರ್ಚೆ

ಮುಂಬೈ. ೨೪- ಹಫ್ತಾ ವಸೂಲಿ ಆರೋಪಕ್ಕೆ ಗುರಿಯಾಗಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ದೇಶ್‌ಮುಖ್ ಮುಖ್ಯಮಂತ್ರಿ ಉದ್ಧವ್‌ಠಾಕ್ರೆ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿ ಪರಂಬೀರ್ ೧೦೦ ಕೋಟಿ ರೂ. ಹಫ್ತಾ ವಸೂಲಿಗೆ ಗೃಹ ಸಚಿವರು ಸೂಚಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದು, ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಈ ಆರೋಪ ಕೇಳಿ ಬಂದ ಬೆನ್ನಲ್ಲೆ ಇದೇ ಮೊದಲ ಬಾರಿಗೆ ದೇಶ್‌ಮುಖ್ ಮುಖ್ಯಮಂತ್ರಿಯವರನ್ನು ಭೇಟಿಮಾಡಿ ಚರ್ಚೆ ನಡೆಸಿದ್ದಾರೆ.
ಉದ್ಧವ್‌ಠಾಕ್ರೆ ನಿವಾಸದಲ್ಲಿ ಒಂದು ತಾಸಿಗೂ ಹೆಚ್ಚುಕಾಲ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಗೃಹ ಸಚಿವರ ವಿರುದ್ಧ ಆರೋಪ ಕೇಳಿ ಬಂದ ನಂತರ ಮುಖ್ಯಮಂತ್ರಿ ಉದ್ಧವ್‌ಠಾಕ್ರೆ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಬಗ್ಗೆ ಸಮಗ್ರ ಚರ್ಚೆ ನಡೆಯುವ ನಿರೀಕ್ಷೆ ಇದೆ.
ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಚರ್ಚೆ ನಡೆಸಿ ಗೃಹ ಸಚಿವರ ವಿರುದ್ಧ ಮಾಜಿ ಪೊಲೀಸ್ ಆಯುಕ್ತ ಮಾಡಿರುವ ಆರೋಪಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದೆ.