ಉದ್ದಿಮೆ ರೂಪದಲ್ಲಿ ಹೈನುಗಾರಿಕೆ ಕೈಗೊಳ್ಳಲು ರೈತರಿಗೆ ಸಲಹೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಡಿ.೩೦; ಹೈನುಗಾರಿಕೆಯನ್ನು ಲಾಭದಾಯಕವಾಗಿಸಲು ಉದ್ದಿಮೆ ರೂಪದಲ್ಲಿ ಹೈನುಗಾರಿಕೆ ಕೈಗೊಳ್ಳಬೇಕು ಎಂದು ರೈತರಿಗೆ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಆರ್.ರಜನೀಕಾಂತ ಸಲಹೆ ನೀಡಿದರು.ಹಿರಿಯೂರು ತಾಲ್ಲೂಕು ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಲಾಭದಾಯಕ ಹೈನುಗಾರಿಕೆ  ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಖರ್ಚು ವೆಚ್ಚವನ್ನು ಲೆಕ್ಕವಿಟ್ಟು ವೈಜ್ಞಾನಿಕವಾಗಿ ಉತ್ತಮ ತಳಿಯ ಹಸು ಎಮ್ಮೆಗಳನ್ನು ಖರೀದಿಸಿ, ಕೊಟ್ಟಿಗೆ ಮತ್ತು ಪೋಷಕಾಂಶ ಮೇವಿನ ನಿರ್ವಹಣೆ ಮಾಡಬೇಕು. ರಾಸುಗಳ ಆರೋಗ್ಯ ನಿರ್ವಹಣೆಯ ಕುರಿತು ರೈತರು ಈ ತರಬೇತಿಯಲ್ಲಿ ನಿಡಲಾಗುವ ಮಾಹಿತಿಯ ಸದುಪಯೋಗ ಪಡೆದುಕೊಳ್ಳಬೇಕು. ಹೈನುಗಾರಿಕೆ ಒಂದು ಪರಿಸರ ಸ್ನೇಹಿ ಕೃಷಿ ಉಪಕಸುಬಾಗಿದ್ದು, ರೈತರ ಆರ್ಥಿಕ ಮಟ್ಟ, ಜನರ ಆರೋಗ್ಯ ಸುಧಾರಿಸುವಲ್ಲಿ ಸಹಕಾರಿಯಾಗಿದ್ದು ರೈತರು ಸ್ವಾವಲಂಬನೆಯ ಜೀವನ ನಡೆಸಲು ಅನುಕೂಲಕರವಾಗಿದೆ ಎಂದರು. ಭಾರತ ದೇಶವು ಇಡೀ ಪ್ರಪಂಚದಲ್ಲಿ ಹಾಲಿನ ಉತ್ಪಾದನೆಯಲ್ಲಿ ಮುಂದಿದೆ. ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್ ರಾಜ್ಯಗಳು ದೇಶದ ಒಟ್ಟು ಹಾಲಿನ ಉತ್ಪಾದನೆಯಲ್ಲಿ ಶೇ.50ಕ್ಕಿಂತ ಹೆಚ್ಚಿನ ಹಾಲು ಉತ್ಪಾದಿಸುತ್ತಿವೆ. ಕರ್ನಾಟಕ ರಾಜ್ಯ 9ನೇ ಸ್ಥಾನದಲ್ಲಿದೆ ಎಂದು ಹೇಳಿದರು.ರೈತಪರ ಚಿಂತಕ ಹಾಗೂ ನೀರಾವರಿ ಹೋರಾಟಗಾರ ಕಸವನಹಳ್ಳಿ ರಮೇಶ್ ಮಾತನಾಡಿ, ಹಿಂದೆ ಹಸು ಸಾಕಾಣಿಕೆಯು ಕೃಷಿಯಲ್ಲಿ ಅನಿವಾರ್ಯವಾಗಿತ್ತು. ಹೈನುಗಾರಿಕೆಯು ರೈತರ ಜೀವನ ಮಟ್ಟ ಸುಧಾರಿಸಲು ಆಧಾರವಾಗಿದೆ. ಕೋಲಾರದಲ್ಲಿ ಹಸು ಸಾಕಾಣಿಕೆಯಲ್ಲಿ ಅನುಸರಿಸುವ ವೈಜ್ಞಾನಿಕ ಪದ್ದತಿ ಮತ್ತು ಅಲ್ಲಿನ ಜನರ ಕೃಷಿಯ ಮೇಲಿನ ಬದ್ದತೆಯನ್ನು ನೋಡಿ ಜಿಲ್ಲೆಯ ರೈತರು ಅದನ್ನು ಅನುಸರಿಸಬೇಕು ಎಂದರು.