ಉದ್ಘಾಟನೆ ಕಾಣದೆ ಪಾಳು ಬಿದ್ದಿರುವ ಗುರುಭವನ

ಬೀದರ:ಮಾ.30: ಶಿಕ್ಷಕರಿಗೆ ವಸತಿ ಸೌಲಭ್ಯ ಕೊಡುವ ಉದ್ದೇಶದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀದರ್ ಜಿಲ್ಲೆಯಲ್ಲಿ ಗುರು ಭವನ ಕಟ್ಟಲಾಗಿದೆ. ಆದರೆ ಸುಸ್ಸಜ್ಜಿತ ಕಟ್ಟಡ ಕಟ್ಟಿ ಒಂದು ದಶಕ ಕಳೆದರು ಉದ್ಘಾಟನೆಯಾಗದೆ ಕಟ್ಟಡ ಪಾಳುಬಿದ್ದಿದ್ದು, ಇಲ್ಲಿನ ಬಹುತೇಕ ವಸ್ತುಗಳು ಕಳ್ಳರ ಪಾಲಾಗುತ್ತಿವೆ. ಇಷ್ಟಾದರೂ ಕೂಡ ಸಾರ್ವಜನಿಕ ಶಿಕ್ಷಣ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಈ ಕಟ್ಟಡಗಳು ಉದ್ಘಾಟನೆಗೆ ಮುಂಚೆಯೇ ಹಾಳು ಕೊಂಪೆಯಾಗಿವೆ.

ಗ್ರಾಮೀಣ ಭಾಗದಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಅನುಕೂಲವಾಗಲಿ ಎಂದು ಗುರುಭವನವನ್ನು ಕಟ್ಟಲಾಗಿದೆ. ಒಂದೇ ಕಟ್ಟಡದಲ್ಲಿ 12 ಕುಟುಂಬಗಳ ವಾಸ ಮಾಡಲು ಅನೂಕೂಲವಾಗಲಿ ಎಂದು ಸುಸಜ್ಜಿತವಾಗಿ ಪ್ಲಾನ್ ಮಾಡಿ ಕಟ್ಟಡಗಳನ್ನ ಕಟ್ಟಿದ್ದಾರೆ. ಆದರೆ ಅವುಗಳನ್ನ ಉದ್ಘಾಟನೆ ಮಾಡದೇ ಇರುವುದರಿಂದ ಇನ್ನು ಕೂಡ ಶಿಕ್ಷಕರ ವಸತಿಗೆ ಅವಕಾಶ ಕಲ್ಪಿಸಿಲ್ಲ.ಒಂದೊಂದು ಕಟ್ಟಡಕ್ಕೆ 33.34 ಲಕ್ಷ ರೂಪಾಯಿಯಷ್ಟು ಹಣ ಖರ್ಚುಮಾಡಿ, ಜಿಲ್ಲೆಯ ವಿವಿಧ ಭಾಗದಲ್ಲಿ ಸುಮಾರು 12 ಕಟ್ಟಡ ಕಟ್ಟಲಾಗಿದೆ. ಅದರಲ್ಲಿನ 3 ಕಟ್ಟಡದಲ್ಲಿ ಮಾತ್ರ ಶಿಕ್ಷಕರು ವಾಸ ಮಾಡುತ್ತಿದ್ದು, ಇನ್ನೂ ಉಳಿದ 9 ಕಟ್ಟಡದಲ್ಲಿ ಶಿಕ್ಷಕರು ವಾಸಮಾಡುತ್ತಿಲ್ಲ. ಇದರ ಪರಿಣಾಮವಾಗಿ ಈ ಕಟ್ಟಡಗಳು ಜೂಜು ಕೋರರ ಅಡ್ಡೇಯಾಗಿ ಅನೈತಿಕ ಚಟುವಟಿಕೆಗೆ ತಾಣವಾಗಿ ಬಳಕೆಯಾಗುತ್ತಿವೆ. ಲಕ್ಷ ಲಕ್ಷ ಸುರಿದು ಕಟ್ಟಿಸಿದ ಕಟ್ಟಡ ಬಳಕೆಮಾಡದಿದ್ದರೇ ಏನು ಪ್ರಯೋಜನ. ಕೂಡಲೇ ಕಟ್ಟಡಗಳನ್ನ ಉದ್ಘಾಟನೆ ಮಾಡಿ ಶಿಕ್ಷಕರ ವಸತಿಗೆ ಅನುಕೂಲ ಕಲ್ಪಿಸಿ ಎಂದು ಗ್ರಾಮದ ನಿವಾಸಿ ಸತೀಶ್ ಬಿರಾದಾರ್ ಭಾತಂಬ್ರಾ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.
ಜಿಲ್ಲೆಯ ವಿವಿಧ ಕಡೆಗಳಲ್ಲಿ ಸರಿ ಸುಮಾರು 12 ಸುಸಜ್ಜಿತ ಗುರುಭವನ ಕಟ್ಟಡಗಳನ್ನ ಕಟ್ಟಲಾಗಿದೆ. ಆದರೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಕಟ್ಟಡಗಳು ಮಾತ್ರ ಬಳಕೆಯಾಗುತ್ತಿಲ್ಲ. ಜೊತೆಗೆ ಕಟ್ಟಡಗಳು ಕಟ್ಟಿ 10 ವರ್ಷ ಕಳೆದಿದ್ದರಿಂದ ಕಟ್ಟಡಗಳು ಸಂಪೂರ್ಣವಾಗಿ ಹಾಳಾಗುವ ಹಂತ ತಲುಪಿವೆ. ಕಟ್ಟಡಕ್ಕೆ ಹಾಕಿದ ಕಿಟಕಿ ಗಾಜುಗಳನ್ನ ಕಿಡಿಗೇಡಿಗಳು ಒಡೆದು ಹಾಕಿದ್ದು, ವಸತಿ ಗೃಹದ ಬಾಗಿಲುಗಳನ್ನ ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಜನರು ದನಗಳನ್ನ ಮೇಕೆಗಳನ್ನ ತಂದು ಕಟ್ಟುತ್ತಿದ್ದಿದ್ದಾರೆ.
ಇಲ್ಲಿನ ಸಮಸ್ಯೆಯ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಗೊತ್ತಿದ್ದರು ಕೂಡ ಅವರು ಏನೂ ಗೊತ್ತಿಲ್ಲದವರಂತೆ ವರ್ತನೆ ಮಾಡುತ್ತಿದ್ದಾರೆ. ಇದರ ಜೊತೆಗೆ ಬೀದರ್ ತಾಲೂಕಿನ ವಿವಿಧ ಭಾಗದಲ್ಲಿ, ಅಂದರೆ ಬೀದರ್ ತಾಲೂಕಿನ ಕಮಠಾಣ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್ ಕಟ್ಟಡವನ್ನ 36 ಲಕ್ಷ ರೂಪಾಯಿ ವೆಚ್ಚದಲ್ಲಿ 2001-02 ರಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಇದುವರೆಗೂ ಕೂಡ ಆ ಕಟ್ಟಡವನ್ನ ವಿದ್ಯಾರ್ಥಿಗಳ ಬಳಕೆಗೆ ಕೊಟ್ಟಿಲ್ಲ.

ಬೀದರ್ ನಗರದ ನೌಬಾದ್ ಬಡಾವಣೆಯಲ್ಲಿ 2013-14 ನೇ ಸಾಲಿನಲ್ಲಿ 99.42 ಲಕ್ಷ ರೂಪಾಯಿ ಸುರಿದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರಿಗೆ ಎಂದು ಸುಜ್ಜಿತ ಹಾಸ್ಟೇಲ್ ಕಟ್ಟಡ ಕಟ್ಟಲಾಗಿದ್ದು, ಕಳೆದ 6 ವರ್ಷದಿಂದ ಇಲ್ಲಿ ವಿದ್ಯಾರ್ಥಿನಿಯರಿಗೆ ವಾಸಿಸಲಿಕ್ಕೆ ಅವಕಾಶ ಕೊಟ್ಟಿಲ್ಲ.

ಕೊರೊನಾದಿಂದಾಗಿ ಹಾಸ್ಟೇಲ್​ನಲ್ಲಿ ಯಾವುದೇ ವಿದ್ಯಾರ್ಥಿಗಳು ಇಲ್ಲ. ಈ ಕಾರಣಕ್ಕೆ ಕಟ್ಟಡ ಹಾಳಾಗಿದೆ. ನಾಳೆ ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ಕರೆದಿದ್ದೇವೆ. ಅಲ್ಲಿ ಈ ಬಗ್ಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ಬೀದರ್ ಉತ್ತರ ಕ್ಷೇತ್ರದ ಶಾಸಕರಾದ ರಹೀಂ ಖಾನ್ ಹೇಳಿದ್ದಾರೆ.

ಕಟ್ಟಡಗಳು ಇಲ್ಲ ಎಂದು ಅದೆಷ್ಟೋ ಕಡೆಗಳಲ್ಲಿ ಬಾಡಿಗೆ ನೀಡಿ ಶಿಕ್ಷಕರ ವಸತಿಗೆ ಅನೂಕುಲ ಕಲ್ಪಿಸುತ್ತಿರುವ ಶಿಕ್ಷಣ ಇಲಾಖೆ ಒಂದು ಕಡೆಯಾದರೆ ಇಲ್ಲಿ ಸುಸಜ್ಜಿತ ಕಟ್ಟಡವಿದ್ದೂರು ಬಳಸಿಕೊಳ್ಳಲಿಕ್ಕೆ ಅನುಕೂಲ ಕಲ್ಪಿಸದೆ ಶಿಕ್ಷಕ ಜೀವದೊಡನೆ ಚೆಲ್ಲಾಟ ವಾಡುತ್ತಿದೆ.