ಉದ್ಘಾಟನೆಗಷ್ಟೇ ಸೀಮಿತಗೊಂಡ ದಾಸರಹಳ್ಳಿ ಡಯಾಲಿಸಿಸ್ ಕೇಂದ್ರ

ಎಚ್ ಆರ್ ರವೀಶ್
ಬೆಂಗಳೂರು, ನ. ೧೦- ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಡಯಾಲಿಸಿಸ್ ಕೇಂದ್ರಕ್ಕೆಂದು ನಿರ್ಮಿಸಿದ ಕೋಟ್ಯಂತರ ರೂಪಾಯಿ ವೆಚ್ಚದ ಕಟ್ಟಡ,ಇತ್ತ ಡಯಾಲಿಸಿಸ್ ಸೆಂಟರ್ ಗೂ ಅಲ್ಲ..ಅತ್ತ ಬೇರೆ ಯಾವುದೇ ಸಾರ್ವಜನಿಕ ಕಾರ್ಯಗಳಿಗೂ ಪ್ರಯೋಜನವಾಗದೆ, ರಾತ್ರಿ ವೇಳೆ ಅನೈತಿಕ ತಾಣವಾಗಿದೆ…ಉದ್ಘಾಟನೆ ದಿನ ಟೇಪ್ ಕತ್ತರಿಸಿ ಕಾರ್ಯಕ್ರಮದ ನಂತರ ಮುಚ್ಚಿದ ಬಾಗಿಲು ತೆರೆದೇ ಇಲ್ಲ…
ಸುಮಾರು ೧.೫೦ ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಕಟ್ಟಡ ಅಪ್ರಯೋಜಕವಾಗಿರುವುದರಿಂದ ಸರ್ಕಾರದ ಕೋಟ್ಯಂತರ ರೂಪಾಯಿ ಹಣ ಕಣ್ಣ ಮುಂದೆ ಪೋಲಾಗುವಂತಿದೆ.ಇದು ಬೆಂಗಳೂರು ಮಹಾನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ಬಿಬಿಎಂಪಿ ವಾರ್ಡ್ ನಂ ೧೩ ರಲ್ಲಿ ಬಿಬಿಎಂಪಿ ಅನುದಾನದಲ್ಲಿ ನಿರ್ಮಾಣವಾಗಿರುವ ೧.೫೦ ಕೋಟಿ ರೂ ವೆಚ್ಚದ ಕಟ್ಟಡ.
೨೦೨೦ ಆಗಸ್ಟ್ ೨೯ ರಂದು ಸ್ಥಳೀಯ ಶಾಸಕ ಆರ್ ಮಂಜುನಾಥ್ ಹಾಗೂ ಸಂಸದ ಸದಾನಂದ ಗೌಡ ಅವರು ಕೇಂದ್ರ ಸಚಿವರಾಗಿದ್ದಾಗ ಕಟ್ಟಡ ಉದ್ಘಾಟನೆ ನೆರವೇರಿಸಿದ್ದಾರೆ.ಆಗಿನ ಸ್ಥಳೀಯ ಪಾಲಿಕೆ ಸದಸ್ಯ ಎನ್ ಲೋಕೇಶ್ ಅಧ್ಯಕ್ಷತೆ ಆಗಿನ ಮಹಾಪೌರರಾಗಿದ್ದ ಗೌತಮ್ ಕುಮಾರ್ ,ಉಪಮೇಯರ್ ರಾಮ ಮೋಹನ ರಾಜು,ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಅವರ ಘನ ಉಪಸ್ಥಿತಿ ಮತ್ತು ದಾಸರಹಳ್ಳಿ ವಲಯ ಬಿಬಿಎಂಪಿ ಜಂಟಿ ಆಯುಕ್ತ ನರಸಿಂಮೂರ್ತಿ, ಮುಖ್ಯ ಇಂಜಿನಿಯರ್ ದೊಡ್ಡಯ್ಯ, ಪ್ಲಾನಿಂಗ್ ಎಕ್ಸಿಕ್ಯುಟಿವ್ ಇಂಜಿನಿಯರ್ ಸೈಯದ್ ಅತೀಕೂರ್ ರೆಹಮಾನ್ ಇದ್ರೂಸ್ ಅವರ ನೇತೃತ್ವದಲ್ಲಿ ಕಟ್ಟಡ ಉದ್ಘಾಟನೆಗೊಂಡಿದೆ.
೨೦೧೯ ರ ಬಿಬಿಎಂಪಿ ಬಜೆಟ್ ನಲ್ಲಿ ಬೆಂಗಳೂರು ನಗರದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಬಡ ಮತ್ತು ಮಧ್ಯಮ ವರ್ಗದ ಕಿಡ್ನಿ ರೋಗಿಗಳಿಗೆ ಅನುಕೂಲವಾಗಲೆಂದು ಡಯಾಲಿಸಿಸ್ ಸೆಂಟರ್ ಪ್ರಾರಂಭಿಸುವ ನಿಟ್ಟಿನಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿತ್ತು. ೨೮ ಕ್ಷೇತ್ರಗಳಲ್ಲಿ ರಾಜರಾಜೇಶ್ವರಿ ನಗರ,ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ೮ ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಡಯಾಲಿಸಿಸ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆರೇಳು ಕಡೆ ಕಟ್ಟಡಗಳ ಕಾಮಗಾರಿ ಅಂತಿಮ ಹಂತದಲ್ಲಿವೆ.ಕೆಲವು ಕಡೆ ಶುರುವಾಗದೆ ಅನುದಾನ ಹಿಂದಕ್ಕೆ ಹೋಗಿದೆ.
ಅದರಂತೆಯೇ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಮಲ್ಲಸಂದ್ರ ವಾರ್ಡ್‌ನ ಆಗ ಕಾರ್ಪೊರೇಟರ್ ಆಗಿದ್ದ ಎನ್ ಲೋಕೇಶ್ ಅವರು ಪ್ರಭಾವ ಬೀರಿ ತಮ್ಮ ಕ್ಷೇತ್ರಕ್ಕೆ ಡಯಾಲಿಸಿಸ್ ಸೆಂಟರ್ ಕಟ್ಟಡ ಸ್ಯಾಂಗ್ಷನ್ ಮಾಡಿಸಿಕೊಂಡು ಬಂದು ೧.೫೦ ಕೋಟಿ ರೂ ವೆಚ್ಚದಲ್ಲಿ ಟೆಂಡರ್ ಮೂಲಕ ಕಟ್ಟಡ ನಿರ್ಮಿಸಿದ್ದಾರೆ. ೫೦x೮೦ ಚದರ ಅಡಿ ವಿಸ್ತೀರ್ಣದಲ್ಲಿ ನೆಲಮಹಡಿ ಕಟ್ಟಡ ನಿರ್ಮಿಸಿದ್ದಾರೆ.
ಒಂದೂವರೆ ಕೋಟಿಯಲ್ಲಿ ಸುಮಾರು ೭೦ ಲಕ್ಷ ರೂ ಗೋಲ್ ಮಾಲ್ ಅಂತೂ ಆಗಿದೆ. ಎಂತಹ ಸೂಪರ್ ಕಟ್ಟಡ ಕಟ್ತೀವಿ ಅಂದರೂ ೪೦೦೦ ಚದರ ಅಡಿ ಕಟ್ಟಡಕ್ಕೆ ೮೦ ಲಕ್ಷ ರೂ ಆಗುತ್ತೆ.ಅದೂ ನೆಲ ಮಹಡಿ ಮಾತ್ರ ಅದಕ್ಕೆ ೧.೫೦ ಕೋಟಿ ರೂ ಆಗಿದೆ ಅಂದರೆ ನಗಬೇಕೋ ಅಳಬೇಕೋ ಗೊತ್ತಾಗಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಸೋಮಶೇಖರ್.
ಕಟ್ಟಡ ಕಟ್ಟಿ ಬಿಟ್ಟು ವರ್ಷದ ಮೇಲಾಯ್ತು, ಅಷ್ಟರಲ್ಲಿ ಕಾರ್ಪೊರೇಟರ್ ಅವಧಿ ಮುಗೀತು..ಶಾಸಕರು, ಕಾರ್ಪೊರೇಟರ್ ನಡುವೆ ಏನೇನು ಬಂತೋ ಏನೋ ಕಟ್ಟಡಕ್ಕೂ ಗ್ರಹಣ ಬಡಿದು ನಿಂತಿದೆ. ಡಯಾಲಿಸಿಸ್ ಕೇಂದ್ರ ಅಂತಾ ನಾವು ಬರೀ ಬೋರ್ಡ್‌ನಲ್ಲಷ್ಟೇ ನೋಡಿಕೊಳ್ಳಬೇಕು.ನಮ್ಮ ಶಾಸಕರು ಇದನ್ನ ಮರೆತು ಬಿಟ್ಟವರೋ ಏನೋ…ನೋಡೋಣ ಯಾವಾಗ ಸರಿ ಹೋಗುತ್ತೆ ಎನ್ನುತ್ತಾರೆ ದಾಸರಹಳ್ಳಿ ನಿವಾಸಿ ಮಂಜುಳಮ್ಮ..
ಸದರಿ ಡಯಾಲಿಸಿಸ್ ಕಟ್ಟಡದ ರುವಾರಿ ಹಾಗೂ ಮಾಜಿ ಕಾರ್ಪೊರೇಟರ್ ಲೋಕೇಶ್ ಅವರ ಪ್ರಕಾರ ೧.೫೦ ಕೋಟಿ ರೂ ಅನುದಾನ ಕೇವಲ ಕಟ್ಟಡಕ್ಕಷ್ಟೇ ಬಿಡುಗಡೆ ಆಗಿತ್ತು.ಉತ್ತಮ ದರ್ಜೆಯ ಕಟ್ಟಡ ಕಟ್ಟಲಾಗಿದೆ.ನಂತರ ಡಯಾಲಿಸಿಸ್ ಯಂತ್ರೋಪಕರಣಗಳು ಹಾಗೂ ಸಿಬ್ಬಂದಿ ನೇಮಕ ಪ್ರಕ್ರಿಯೆ ಮಾಡಬೇಕಿತ್ತು ಅಷ್ಟರಲ್ಲಿ ಬಿಬಿಎಂಪಿ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿಯಿತು.ಸ್ಥಳೀಯ ಶಾಸಕರು ಇತ್ತ ಗಮನ ಹರಿಸಿ ಸರ್ಕಾರದ ಕಡೆಯಿಂದ ಈ ಡಯಾಲಿಸಿಸ್ ಕೇಂದ್ರಕ್ಕೆ ಯಂತ್ರೋಪಕರಣಗಳನ್ನು ಅಳವಡಿಸಿ ಸಿಬ್ಬಂದಿ ನೇಮಕ ಮಾಡಿಕೊಂಡು ಕೇಂದ್ರವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕೆಂದು ಮನವಿ ಮಾಡಿದರು.
ಇದೇ ಕಟ್ಟಡದ ಮೇಲೆ ಮೊದಲ ಮತ್ತು ಎರಡನೇ ಅಂತಸ್ತಿನ ಕಟ್ಟಡ ಕಟ್ಟಿ ಅಲ್ಲಿ ಪುರುಷ ಹಾಗೂ ಮಹಿಳಾ ಅಂಗವಿಕಲರ ಪುನಶ್ಚೇತನ ಕೇಂದ್ರ ಆರಂಭಿಸಲು ಮೂರು ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು ಅದು ಬಳಕೆಯಾಗದೆ ಆ ಅನುದಾನವನ್ನು ಫ್ರೀಜ್ ಮಾಡಲಾಗಿದೆ ಈ ಬಗ್ಗೆಯೂ ಶಾಸಕರು ಗಮನಹರಿಸಬೇಕೆಂದು ಲೋಕೇಶ್ ಹೇಳಿದರು.
ಒಟ್ಟಾರೆ ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಾಣಗೊಂಡು ಅಪ್ರಯೋಜಕವಾಗಿರುವ ದಾಸರಹಳ್ಳಿಯ ಮಲ್ಲಸಂದ್ರ ಡಯಾಲಿಸಿಸ್ ಕೇಂದ್ರಕ್ಕೆ ಅಭಿವೃದ್ಧಿ ಎಂಬ ಆಕ್ಸಿಜನ್ ನೀಡುವ ಅಗತ್ಯವಿದೆ.ಸ್ಥಳೀಯ ಶಾಸಕ ಆರ್ ಮಂಜುನಾಥ್ ಅವರು ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತಂದು ಈ ಡಯಾಲಿಸಿಸ್ ಕೇಂದ್ರಕ್ಕೆ ಕಾಯಕಲ್ಪ ನೀಡಿ ಕ್ಷೇತ್ರದ ಬಡ ಮತ್ತು ಮಧ್ಯಮ ವರ್ಗದ ಕಿಡ್ನಿ ಕಾಯಿಲೆಯಿಂದ ನರಳುತ್ತಿರುವವರಿಗೆ ಜೀವ ದಾನ ಮಾಡುವಂತ ಜವಾಬ್ದಾರಿ ನಿಭಾಯಿಸಬೇಕಿದೆ.
ದುರಂತ ಅಂದರೆ ಈ ಕಟ್ಟಡ ಬಿಬಿಎಂಪಿಗೆ ಸೇರಿದ್ದು,ಆದರೆ ದಾಸರಹಳ್ಳಿ ವಲಯ ಬಿಬಿಎಂಪಿ ಆರೋಗ್ಯ ಇಲಾಖೆಯವರಿಗೇ ಇದರ ಬಗ್ಗೆ ಮಾಹಿತಿ ಇಲ್ಲ.ಅಧಿಕಾರಿಯೊಬ್ಬರನ್ನ ಕೇಳಿದರೆ ಆ ತರಹದ ಕಟ್ಟಡ ನಮ್ಮಲ್ಲಿ ಇದೆಯಾ ಅಂತಾ..ಕಿರಿಯ ಅಧಿಕಾರಿಗಳನ್ನ ಕೇಳಿ..ಹೌದಾ ನಮಗೆ ಗೊತ್ತೇ ಇಲ್ವಲ್ಲಾ..ಜಿಲ್ಕಾ ಆರೋಗ್ಯಾಧಿಕಾರಿ ಮಟ್ಟದಲ್ಲೇ ಎಲ್ಲಾ ಆಗಿ ಹೋಗಿದೆ ಅಂತಾರೆ..ಇದಕ್ಕೆ ನಗಬೇಕೋ..ಅಳಬೇಕೋ ಗೊತ್ತಾಗಲ್ಲ….