ಉದಯೋನ್ಮುಖ ಕತೆಗಾರರಿಗೆ ವೇದಿಕೆ ಕಲ್ಪಿಸಿದ ಕಥಾ ಕಮ್ಮಟ

ನಾಗರಾಜ ಹೂವಿನಹಳ್ಳಿ
ಕಲಬುರಗಿ,ಜೂ.27-ಸಾಹಿತ್ಯಾಸಕ್ತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೊರಗಿನ ನಡುವೆ ಅಲ್ಲಲ್ಲಿ, ಆಗಾಗ ನಡೆಯುವ ಸಾಹಿತ್ಯ ಕಾರ್ಯಕ್ರಮ, ವಿಚಾರ ಸಂಕಿರಣ, ಪುಸ್ತಕ ಲೋಕಾರ್ಪಣೆ, ಕಥಾ, ಕಾವ್ಯ ಕಮ್ಮಟಗಳು ಯುವ ಜನರಲ್ಲಿ ಸಾಹಿತ್ಯ ಆಸಕ್ತಿ ಬೆಳೆಸುವುದರ ಜೊತೆಗೆ ಹೊಸ ಬರಹಗಾರರನ್ನು ಹುಟ್ಟು ಹಾಕುವಲ್ಲಿಯೂ ಯಶಸ್ವಿಯಾಗುತ್ತಿವೆ.
ಯುವ ಜನರಲ್ಲಿ ಸಾಹಿತ್ಯ ಆಸಕ್ತಿ ಬೆಳೆಸುವ, ಯುವ ಕತೆಗಾರಿಗೆ ಉತ್ತೇಜನ ನೀಡುವ ಉದ್ಧೇಶದಿಂದ ವೀರಲೋಕ ಪುಸ್ತಕ ಪ್ರಕಾಶನ ಹಾಗೂ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಹಯೋಗದಲ್ಲಿ ನಗರದ ನೂತನ ಪದವಿ ಮಹಾವಿದ್ಯಾಲಯದ ಅನಂತರಾವ ದೇಶಮುಖ ಸಭಾಂಗಣದಲ್ಲಿ ಜೂನ್ 25 ಮತ್ತು 26 ರಂದು ಎರಡು ದಿನಗಳ ಕಾಲ ನಡೆದ ” ದೇಶಿ ಜಗಲಿ ಕಥಾ ಕಮ್ಮಟ” ಇದಕ್ಕೆ ಸಾಕ್ಷಿಯಾಯಿತು.
ಸಣ್ಣ ಕತೆಯ ಸ್ವರೂಪ, ತಂತ್ರ, ವಸ್ತು, ಭಾಷೆ, ಕನ್ನಡ ಸಣ್ಣ ಕಥಾ ಪರಂಪರೆ ಕುರಿತ ಉಪನ್ಯಾಸ, ಪ್ರಾತಿನಿಧಿಕ ಕತೆಗಳ ಓದು, ವಿಶ್ಲೇಷಣೆ ಯುವ ಕತೆಗಾರರಲ್ಲಿ ಕತೆ ಕಟ್ಟುವ ಕ್ರಿಯೆಯ ಬಗ್ಗೆ ಆಸಕ್ತಿ ಮೂಡಿಸಿದವು.
ಅಧ್ಯಾಪಕರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ 40ಕ್ಕೂ ಹೆಚ್ಚು ಜನ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದರು. ಈಗಾಗಲೇ ಕತೆಗಳನ್ನು ಬರೆದವರು, ಕತೆ ಬರೆಯಲು ಆರಂಭಿಸಿದವರು, ಓದಿನ ಹಿನ್ನೆಲೆ ಇರುವವರು ಉತ್ತಮವಾದ ಕತೆಗಳನ್ನು ಬರೆದು ಓದಿದರು.
ಬರ, ಕರೋನಾ, ಪ್ರಸ್ತುತ ರಾಜಕೀಯ ಮತ್ತು ಉದ್ಯೋಗಸ್ಥ ಮಹಿಳೆ ವಿಷಯ ಕುರಿತು ಶಿಬಿರಾರ್ಥಿಗಳಿಗೆ ಕತೆ ಬರೆಯಲು ಸೂಚಿಸಲಾಗಿತ್ತು. ಈ ವಿಷಯಗಳ ಮೇಲೆ ಅನೇಕರು ಕತೆಗಳನ್ನು ಬರೆದು ಓದಿದರು. ಮೊದಲ ದಿನ ವೀರಲೋಕ ಆಯ್ಕೆ ಮಾಡಿ ಕಳುಹಿಸಿದ ಹನ್ನೆರಡು ಕತೆಗಳ ಜೊತೆಗೆ ಸ್ಥಳೀಯ ಕತೆಗಾಗರರ ಕತೆಗಳು ಮತ್ತು ಒಂದು ಅನುವಾದೀತ ಕತೆಯನ್ನು ಓದಿ ಆ ಕತೆಗಳ ಬಗ್ಗೆ ವಿಶ್ಲೇಷಣೆ ಮಾಡಲು ತಿಳಿಸಲಾಗಿತ್ತು. ಶಿಬಿರಾರ್ಥಿಗಳು ಕತೆಗಳನ್ನು ಓದಿ ತಮ್ಮದೇಯಾದ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡರು.
ಕತೆ ಕಟ್ಟುವ ಬಗೆ
ಶಿಬಿರದ ನಿರ್ದೇಶಕ, ಹಿರಿಯ ಕತೆಗಾರ ಡಾ.ಚನ್ನಪ್ಪ ಕಟ್ಟಿ ಅವರು ಕತೆ ಕಟ್ಟುವ ಬಗೆಯ ಕುರಿತು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಯುವ ಕತೆಗಾರರನ್ನು ಬೆಳಕಿಗೆ ತರುವ ಉದ್ದೇಶದಿಂದ ವೀರಲೋಕ ಪ್ರಕಾಶನ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಳೀಯ ಶಿಕ್ಷಣ ಸಂಸ್ಥೆಗಳ, ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ” ದೇಶಿ ಜಗಲಿ ಕಥಾ ಕಮ್ಮಟ ಆಯೋಜಿಸುತ್ತಿದೆ. ಈಗಾಗಲೇ ಕೈವಾರ, ಬೀದರ್, ಕಲಬುರಗಿ ಸೇರಿ ಮೂರು ಜಿಲ್ಲೆಗಳಲ್ಲಿ ಕಮ್ಮಟ ನಡೆಸಿದೆ. ಜುಲೈ ತಿಂಗಳಲ್ಲಿ ಬಾಗಲಕೋಟ ಮತ್ತು ವಿಜಯಪುರಗಳಲ್ಲಿ ಕಮ್ಮಟ ನಡೆಯಲಿದೆ. ಯುವ ಪ್ರತಿಭಾವಂತ ಸಾಹಿತಿಗಳನ್ನು ಗುರುತಿಸಿ. ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಕಮ್ಮಟದ ಉದ್ದೇಶವಾಗಿದೆ ಎಂದರು.
ಯುವ ಬರಹಗಾರರಿಗೆ ವೇದಿಕೆ
ಕತೆ ರಚನೆಯ ಕುರಿತು ಎರಡು ದಿನಗಳ ಈ ಕಮ್ಮಟದಲ್ಲಿ ಚಿಂತನ- ಮಂಥನ ನಡೆಸಲಾಗಿದೆ. ಸಾಹಿತ್ಯದಿಂದ ದೂರ ಇರುವ ಯುವ ಸಮೂಹವನ್ನು ಸೆಳೆಯಲು ಇಂತಹ ಕಮ್ಮಟಗಳು ನೆರವಾಗಲಿವೆ. ಇಂತಹ ಕಮ್ಮಟಗಳು ಯುವ ಬರಹಗಾರರ ಉದಯಕ್ಕೆ ಕಾರಣವಾಗಲಿವೆ ಎಂದು ಶಿಬಿರದ ಸಂಚಾಲಕಿ ಡಾ.ಚಂದ್ರಕಲಾ ಬಿದರಿ ತಿಳಿಸಿದರು.
ಬರವಣಿಗೆ ಬದುಕಿನ ರಹಸ್ಯ ಶೋಧ
ಶಿಬಿರ ಉದ್ಘಾಟಿಸಿದ ಯುವ ಕತೆಗಾರ ಸಿ.ಎಸ್.ಆನಂದ ” ಸಾಹಿತ್ಯ ಓದು ಹಾಗೂ ಹುಟ್ಟೂರಿನ ಪರಿಸರ ಸಾಮಾನ್ಯ ವ್ಯಕ್ತಿಯನ್ನು ಬರಹಗಾರನ್ನಾಗಿಸುತ್ತದೆ. ಬರವಣಿಗೆ ಬದುಕಿನ ರಹಸ್ಯ ಶೋಧನೆಯ ದಾರಿಯಾಗಬೇಕು. ಪ್ರಶಸ್ತಿಗಳ ಬೆನ್ನು ಹತ್ತದೆ ಸದ್ದಿಲ್ಲದೆ ಸಾಹಿತ್ಯ ಕೃಷಿಯಲ್ಲಿ ತೊಡಗಬೇಕು” ಎಂದು ಕಿವಿಮಾತು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಹಿರಿಯ ಕತೆಗಾರ ಮಹಾಂತೇಶ ನವಲಕಲ್ ಅವರು, ಇದುವರೆಗೂ ಗ್ರಾಮೀಣ ಪ್ರದೇಶದಲ್ಲಿನ ಗೌಡ, ಜಮೀನ್ದಾರರ ದಬ್ಬಾಳಿಕೆ ಕುರಿತು ಕತೆಗಳನ್ನು ಬರೆದಿದ್ದು, ಓದಿದ್ದು ಆಗಿದೆ.ಆದರೆ ಪ್ರಸ್ತುತ ದಬ್ಬಾಳಿಕೆ, ದೌರ್ಜನ್ಯದ ಸ್ವರೂಪ ಬದಲಾಗಿದೆ. ಅದರ ಮುಂದುವರಿದ ಭಾಗದ ಕುರಿತು ಕತೆಗಳು ಬರುತ್ತಿಲ್ಲ. ಇದರ ಕಡೆಗೆ ಕತೆಗಾರರು ಗಮನ ಹರಿಸಬೇಕಾಗಿದೆ ಎಂದರು.
ಶಿಬಿರದ ಸಹ ಸಂಚಾಲಕ ಡಾ.ಮಲ್ಲಿನಾಥ ತಳವಾರ, ವೀರಲೋಕ ಪುಸ್ತಕ ಪ್ರಕಾಶನದ ಕೋ=ಆರ್ಡಿನೇಟರ್, ಕತೆಗಾರ ಹನುಮಂತ ಹಾಲಗೇರಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಒಟ್ಟಾರೆ ಎರಡು ದಿನಗಳ ಕಥಾ ಕಮ್ಮಟ ಯಶಸ್ವಿಯಾಗಿ ಜರುಗಿತು.

ಹೊಸ ಕತೆಗಾರರ ಉದಯ
ಎರಡು ದಿನಗಳ ಕಥಾ ಕಮ್ಮಟ ಯಶಸ್ವಿಯಾಗಿದೆ. ಹೊಸ ಕತೆಗಾರರ ಉದಯಕ್ಕೆ ಕಾರಣವಾಗಿದೆ. ಯುವ ಕತೆಗಾರರ ಕೊರತೆ ನೀಗಿಸಿದೆ.

  • ಡಾ.ಚಂದ್ರಕಲಾ ಬಿದರಿ, ಶಿಬಿರದ ಸಂಚಾಲಕರು

ಕಥಾ ಕಮ್ಮಟ ಫಲಪ್ರದ
ಎರಡು ದಿನಗಳ ಕಥಾ ಕಮ್ಮಟ ಫಲಪ್ರದವಾಗಿದೆ. ಯುವ ಕತೆಗಾರರು ಖಂಡಿತವಾಗಿ ಈ ಭಾಗದಲ್ಲಿ ಬರುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

  • ಡಾ.ಚನ್ನಪ್ಪ ಕಟ್ಟಿ, ಶಿಬಿರದ ನಿರ್ದೇಶಕರು.