ಉದಕಮಂಡಲದಲ್ಲಿ ಬಿಜೆಪಿ ಪರ ಎಸ್‌ಟಿಎಸ್ ಪ್ರಚಾರ

ಉದಕಮಂಡಲಂ, ಮಾ.೨೯: ಉದಕಮಂಡಲಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯವರಾದ ಬೋಜರಾಜನ್ ಅವರು ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಉತ್ತಮ ಹೆಸರನ್ನು ಪಡೆದಿದ್ದಾರೆ. ಅವರ ಬಗ್ಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಪರ ಅಲೆ ಇದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಉದಕಮಂಡಲಂ ಬಿಜೆಪಿ ಅಭ್ಯರ್ಥಿ ಪರ ಊ ಟಿ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಸ್ಥಳೀಯ ಬಿಜೆಪಿ ತಂಡದೊಂದಿಗೆ ಪ್ರಚಾರ ನಡೆಸಿದ ಸಚಿವರು, ಬೋಜರಾಜನ್ ಅವರನ್ನು ಖುದ್ದು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಹಾಗೂ ಗೃಹಮಂತ್ರಿಗಳಾದ ಅಮಿತ್ ಷಾ ಅವರು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ಆಯ್ಕೆಯ ಮಹತ್ವವು ನಮಗೆ ಪ್ರಚಾರಕ್ಕೆ ಹೋದಾಗ ತಿಳಿಯುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಉದಕಮಂಡಲಂ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ, ಪ್ರಚಾರದಲ್ಲಿ ನಿರತರಾಗಿದ್ದೇವೆ. ಎಲ್ಲೆಡೆ ಸಹ ನಮಗೆ ಉತ್ತಮ ಸ್ಪಂದನೆ ದೊರೆತಿದೆ. ನಮ್ಮ ಅಭ್ಯರ್ಥಿ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳು ಬರುತ್ತಿವೆ ಎಂದು ಹೇಳಿದರು.
ಮತದಾರರ ಒಲವು ಬಿಜೆಪಿ ಕಡೆಗೆ
ಪ್ರಚಾರ ಸಂದರ್ಭದಲ್ಲಿ ಬೋಜರಾಜನ್ ಅವರ ಪರ ನಾವು ಮತ ಯಾಚನೆ ಮಾಡುತ್ತಿದ್ದಂತೆ, ಉತ್ತಮ ಅಭ್ಯರ್ಥಿಯನ್ನು ಈ ಬಾರಿ ನಿಲ್ಲಿಸಿದ್ದೀರಿ, ಅವರಿಗೆ ಈ ಬಾರಿ ಮತ ಚಲಾಯಿಸುತ್ತೇವೆ ಎಂದು ಸಾರ್ವಜನಿಕರೇ ಹೇಳುತ್ತಿದ್ದಾರೆ. ನನಗೆ ತಮಿಳು ಬರದಿದ್ದರೂ ಸಹ ಕನ್ನಡದಲ್ಲಿಯೇ ಮಾತನಾಡಿ ನಮಗೆ ಅರ್ಥವಾಗುತ್ತದೆ ಎಂಬ ಸಹೃದಯ ಮನೋಭಾವವನ್ನು ಇಲ್ಲಿನವರು ಮೆರೆಯುತ್ತಿದ್ದಾರೆ ಎಂದರು.
ಉದಕಮಂಡಲಂ ಕ್ಷೇತ್ರದ ಜೆಎಸ್‌ಎಸ್ ಕಾಲೇಜು, ಬಾಂಬೆ ಕೇಸ್ ವಾರ್ಡ್, ಅಗ್ರಗಾರಂ, ಕೋಡಪ್ಪಮಂದು, ಎಚ್‌ಸಿಎಫ್ ಸೇರಿ ಬೋಟ್ ಹೌಸ್‌ಗಳಲ್ಲಿ ಪ್ರಚಾರ ನಡೆಸಿದ ಸಚಿವರಾದ ಸೋಮಶೇಖರ್ ನೇತೃತ್ವದ ಬಿಜೆಪಿ ತಂಡವು ಬಳಿಕ ವಿವಿಧ ಮುಖಂಡರು, ರಾಜಕಾರಣಿಗಳನ್ನು ಭೇಟಿ ಮಾಡಿ ಮತಯಾಚನೆ ಹಾಗೂ ಮಾತುಕತೆಗಳನ್ನು ನಡೆಸಿತು. ಬಳಿಕ ಆದಿ ಕರ್ನಾಟಕ ಸಂಘ ಸೇರಿದಂತೆ ವಿವಧ ಸಂಘಟನೆಗಳನ್ನು ಭೇಟಿ ಮಾಡಿ ಪ್ರಚಾರ ನಡೆಸಲಾಯಿತು.