ಉತ್ರಂ ಹಬ್ಬ ಶಬರಿಮಲೆ ಭಕ್ತರಿಗೆ ಪ್ರವೇಶ

ತಿರುವನಂತಪುರಂ,ಮಾ.೧೯- ಉತ್ರಂ ಹಬ್ಬದ ಅಂಗವಾಗಿ ಶಬರಿಮಲೆ ದೇವಸ್ಥಾನದ ಬಾಗಿಲನ್ನು ಇಂದು ತೆರೆಯಲಾಗಿದ್ದು, ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಾ. ೨೮ರವರೆಗೂ ಶಬರಿಮಲೆ ದೇವಸ್ಥಾನ ತೆರೆದಿರಲಿದ್ದು, ದೇವಸ್ಥಾನ ಪ್ರವೇಶ ಬಯಸುವ ಭಕ್ತರು ಕೊರೊನಾ ನೆಗೆಟೀವ್ ಪ್ರಮಾಣಪತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಎರಡೂ ಪಕ್ಷಗಳು ಮುಂದಿನ ಚುನಾವಣಾ ಪ್ರಚಾರಕ್ಕಾಗಿ ಈ ವಿಷಯವನ್ನು ಬಳಸಿಕೊಳ್ಳಲು ಮುಂದಾಗಿವೆ. ಈ ನಿಟ್ಟಿನಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಷಯ ಮತ್ತೆ ರಾಜ್ಯದಲ್ಲಿ ಚರ್ಚೆಗೆ ಒಳಪಡುತ್ತಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೇವಾಲಯ ಪ್ರವೇಶ ಕುರಿತಂತೆ ಅಂತಿಮ ತೀರ್ಪು ಬಂದ ನಂತರ ಎಲ್ಲ ವಿಶ್ವಾಸಿಗಳೊಂದಿಗೆ ಚರ್ಚಿಸಿ ರಾಜ್ಯಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಎಡಪಂಥೀಯರ ಮೇಲೆ ಒತ್ತಡ ಹೇರಿ ಸುಪ್ರೀಂಕೋಟ್‌ನಲ್ಲಿ ಹೊಸದಾಗಿ ಅಫಿಡವಿಟ್
ಸಲ್ಲಿಸುವುದನ್ನು ಸ್ಪಷ್ಟಪಡಿಸಿವೆ. ೧೪೦ ಸದಸ್ಯರ ಕೇರಳ ವಿಧಾನಸಭಾ ಚುನಾವಣೆ ಏ. ೬ ರಂದು ನಡೆಯಲಿದ್ದು, ಮತ ಎಣಿಕೆ ಮೇ ೨ಕ್ಕೆ ನಡೆಯಲಿದೆ.