
ಕಲಬುರಗಿ,ಸೆ.15-ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಮಹಿಳೆಯರು ಮನೆಯಲ್ಲಿ ತಯ್ಯಾರಿಸಿರುವ ಗೃಹಪಯೋಗಿ ವಸ್ತುಗಳ ಮಾರಾಟಕ್ಕೆ ಪ್ರೋತ್ಸಾಹ ಮತ್ತು ವೇದಿಕೆ ಅವಶ್ಯಕತೆ ಇದೆ ಎಂದು ಡಿ.ಸಿ ಬಿ.ಫೌಜಿಯಾ ತರನ್ನುಮ್ ಅಭಿಪ್ರಾಯಪಟ್ಟರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಸಂಯುಕ್ತಾಶ್ರಯದಲ್ಲಿ ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಮಹಿಳಾ ಉದ್ಯಮಿಗಳ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷವಾಗಿ ಗ್ರಾಮೀಣ ಮಹಿಳೆಯರಿಗೆ ಇಂತಹ ಒಂದು ಉತ್ತಮ ವೇದಿಕೆ ಕಲ್ಪಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರ ಕಾಸಿಯಾ, ಹೆಚ್.ಕೆ.ಸಿ.ಸಿ.ಐ ಕಾರ್ಯ ಶ್ಲಾಘಿಸಿದ ಅವರು, ಇಂತಹ ಪ್ರದರ್ಶನದಿಂದ ಮಾರಾಟ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಇದಕ್ಕು ಮುನ್ನ ವಸ್ತು ಪ್ರದರ್ಶನದ ಪ್ರತಿಯೊಂದು ಮಳಿಗೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಉತ್ಪನ್ನ, ಮಾರಾಟ, ಲಾಭ-ನಷ್ಟು ಕುರಿತು ಮಹಿಳಾ ಉತ್ಪಾದಕರಿಂದ ಮಾಹಿತಿ ಪಡೆದುಕೊಂಡು ಎರಡು ದಿನದ ಈ ಪ್ರದರ್ಶನದಲ್ಲಿ ಉತ್ತಮ ಮಾರಾಟವಾಗಲಿ ಎಂದು ಶುಭಕೋರಿದರು.
ಧಾನ್ಯಗಳಿಂದ ಚಾಕಲೇಟ್ ತಯ್ಯಾರಿಸುವ ಸಿಲ್ವರ್ ಸ್ಪೂನ್ ಮಳಿಗೆಗೆ ಡಿ.ಸಿ. ಭೇಟಿ ನೀಡಿದ ಸಂದರ್ಭದಲ್ಲಿ 2019ರ ಸ್ಟಾರ್ಟ್ ಅಪ್ ಕರ್ನಾಟಕ ವಿನ್ನರ್ ಕಲಬುರಗಿ ಮೂಲದ ಮಧುಶ್ರೀ ಎನ್.ದೇಶಪಾಂಡೆ ಅವರು ಡಿ.ಸಿ. ಅವರಿಗೆ ಧಾನ್ಯಗಳಿಂದ ತಯ್ಯಾರಿಸಿದ ಚಾಕಲೇಟ್ ನೀಡಿದರು.
ಡಿ.ಸಿ.ಗೆ ಫ್ರೆಂಡ್‍ಶಿಪ್ ಬ್ಯಾಂಡ್ ಕಟ್ಟಿದ ಪ್ರಮೀಳಾ
ವಸ್ತು ಪ್ರದರ್ಶನ ವೀಕ್ಷಣೆ ಸಂದರ್ಭದಲ್ಲಿ ಯಾದಗಿರಿಯ ಕಲಿಕೆ ಟಾಟಾ ಟ್ರಸ್ಟ್‍ನ ಲಂಬಾಣಿ ಉತ್ಪನ್ನ ಮಳಿಗೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರಿಗೆ ಪ್ರಮೀಳಾ ಅವರು ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿದರು. ಡಿ.ಸಿ. ಅವರು ಹಸನ್ಮುಖಿಯೊಂದಿಗೆ ಮಾರಾಟ ಜೋರಾಗಲಿ ಎಂದು ಹೇಳಿ ಮುಂದೆ ಸಾಗಿದರು.
ಇದೇ ಸಂದರ್ಭದಲ್ಲಿ ಸರ್.ಎಂ.ವಿ.ವಿಶ್ವೇಶ್ವರಯ್ಯ ಅವರ ಜನ್ಮದಿನ ಅಂಗವಾಗಿ ಭಾರತ ರತ್ನನಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.
ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಬಿ.ಸತೀಷಕುಮಾರ, ಕಾಸಿಯಾ ಅಧ್ಯಕ್ಷ ಸಿ.ಎ.ಶಶಿಧರ ಶೆಟ್ಟಿ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಬಿ.ಪಾಟೀಲ, ಕಾಸಿಯಾ ಸಂಸ್ಥೆಯ ಪದಾಧಿಕಾರಿಗಳಾದ ಎಂ.ಜಿ.ರಾಜಗೋಪಾಲ, ಎಸ್.ನಾಗರಾಜು, ಶ್ರೇಯಾನ್ಸ್ ಕುಮಾರ ಜೈನ್, ಅರುಣ ಪಡಿಯಾರ್ ಎಸ್.,ಹೆಚ್.ಕೆ.ಮಲ್ಲೇಶಗೌಡ, ಲತಾ ಎಸ್.,ಭೀಮಾಶಂಕರ ಬಿ.ಪಾಟೀಲ ಮತ್ತಿತರಿದ್ದರು.
ಎರಡು ದಿನಗಳ ಈ ಪ್ರದರ್ಶನ ಮೇಳ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ ನಡೆಯಲಿದ್ದು, ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಿಂದ ಸುಮಾರು 80ಕ್ಕೂ ಹೆಚ್ಚು ಮಹಿಳಾ ಉತ್ಪಾದಕರು ತಮ್ಮ ಉತ್ಪನ್ನ ಮಾರಾಟಕ್ಕೆ ಮಳಿಗೆ ಹಾಕಿದ್ದಾರೆ. ಬಟ್ಟೆ, ಆಹಾರ ಉತ್ಪನ್ನಗಳು, ಸಿರಿಧಾನ್ಯ ಉತ್ಪನ್ನಗಳು, ಮಸಾಲೆ ಪದಾರ್ಥಗಳು, ಲಂಬಾಣಿ ಉತ್ಪನ್ನಗಳು, ಮಕ್ಕಳ ಆಟಿಕೆ ಸಾಮಾನುಗಳು, ಪೇಂಟಿಂಗ್ಸ್, ಕಸೂತಿಗಳು ಮಾರಾಟಕ್ಕಿವೆ. ರಾಜಸ್ತಾನಿ ಚಾಟ್ಸ್, ಸಮೋಸಾ, ಭಜಿ, ಪಾನಿಪುರಿ ತಿನಿಸುಗಳ ಸ್ವಾದ ಸವಿಯಬಹುದು. ವಿವಿಧ ಬ್ಯಾಂಕ್ ಗಳು ತನ್ನ ಸೇವೆ ಹಾಗೂ ಸಾಲ ಸೌಲಭ್ಯದ ಮಾಹಿತಿ ನೀಡುವ ಮಳಿಗೆ ಸಹ ಇಲ್ಲಿ ಹಾಕಲಾಗಿದೆ.