ಉತ್ತರ ಭಾರತದಲ್ಲಿ ತೀವ್ರ ಚಳಿ : ಶಾಲೆಗೆ ರಜೆ

ನವದೆಹಲಿ, ಜ. ೨- ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಶೀತದ ಅಲೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರಾಖಂಡ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಕೆಲವೆಡೆ ಮುಂದಿನ ಐದು ದಿನಗಳಲ್ಲಿ ರಾತ್ರಿ ಅಥವಾ ಬೆಳಿಗ್ಗೆ ದಟ್ಟವಾದ ಮಂಜು ಮುಂದುವರಿಯುವ ಸಾಧ್ಯತೆಯಿದೆ. ಹವಾಮಾನ ಏರುಪೇರಿನಿಂದಾಗಿ ಕೆಲವು ರಾಜ್ಯಗಳಲ್ಲಿ ಶಾಲೆಗಳ ರಜೆಯನ್ನು ವಿಸ್ತರಿಸಿವೆ, ಇನ್ನು ಕೆಲವೆಡೆ ಶಾಲಾ ಸಮಯವನ್ನು ಬದಲಾಯಿಸಿವೆ.
ಏತನ್ಮಧ್ಯೆ, ಹವಾಮಾನ ಇಲಾಖೆ ಜನವರಿಯಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನವು ಮಧ್ಯ ಭಾರತದ ಅನೇಕ ಭಾಗಗಳಲ್ಲಿ ಮತ್ತು ಪರ್ಯಾಯ ದ್ವೀಪ, ಪೂರ್ವ ಮತ್ತು ವಾಯುವ್ಯ ಭಾರತದ ಪಕ್ಕದ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ ಎಂದು ತಿಳಿಸಿದೆ. ಪಂಜಾಬ್ ಸರ್ಕಾರವು ರಾಜ್ಯದಲ್ಲಿ ಶೀತ ಅಲೆಗಳ ಪರಿಸ್ಥಿತಿಯಿಂದಾಗಿ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಚಳಿಗಾಲದ ರಜೆಯನ್ನು ಜನವರಿ ೮ ರವರೆಗೆ ವಿಸ್ತರಿಸಿದೆ.ರಾಜ್ಯದಲ್ಲಿ ತೀವ್ರ ಚಳಿ ಮತ್ತು ಮಂಜಿನ ಕಾರಣ, ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಜನವರಿ ೮ ರವರೆಗೆ ರಜಾದಿನಗಳನ್ನು ವಿಸ್ತರಿಸಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಉತ್ತರ ಪ್ರದೇಶದ ತೀವ್ರ ಶೀತದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲಕ್ನೋದ ಎಲ್ಲಾ ಶಾಲೆಗಳು ಇಂದಿನಿಂದ ಜನವರಿ ೧೦ ರವರೆಗೆ ೧ ರಿಂದ ೮ ನೇ ತರಗತಿಯವರೆಗೆ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ರವರೆಗೆ ಕಾರ್ಯನಿರ್ವಹಿಸುತ್ತವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದೆ.ತೀವ್ರ ಶೀತಗಾಳಿ ಮತ್ತು ಅತಿಯಾದ ಮಂಜಿನ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಮಾನ್ಯತೆ ಪಡೆದ ಶಾಲೆಗಳ ೧ ರಿಂದ ೧೨ ನೇ ತರಗತಿಯ ವಿದ್ಯಾರ್ಥಿಗಳಿಗೆ ಜನವರಿ ೪ ರವರೆಗೆ ರಜೆಯನ್ನು ವಿಸ್ತರಿಸಿ ಸೀತಾಪುರ ಜಿಲ್ಲಾಧಿಕಾರಿ (ಡಿಎಂ) ಆದೇಶ ಹೊರಡಿಸಿದ್ದಾರೆ.
ಚಳಿಯ ಹಿನ್ನೆಲೆಯಲ್ಲಿ ಜನವರಿ ೨ ಮತ್ತು ಜನವರಿ ೩ ರಂದು ಎರಡು ದಿನಗಳ ಕಾಲ ಎಲ್‌ಕೆಜಿಯಿಂದ ೮ನೇ ತರಗತಿಯವರೆಗೆ ಸರ್ಕಾರಿ ಮತ್ತು ಇತರ ಮಾನ್ಯತೆ ಪಡೆದ ಶಾಲೆಗಳನ್ನು ಮುಚ್ಚುವಂತೆ ಗೋರಖ್‌ಪುರ ಡಿಎಂ ನಿರ್ದೇಶಿಸಿದ್ದಾರೆ.
ಗುರುವಾರದವರೆಗೆ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ದಟ್ಟವಾದ ಮಂಜು ಕವಿದಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.