ಸಂಜೆವಾಣಿ ವಾರ್ತೆ
ತಿ.ನರಸೀಪುರ: ಜು.05:- ಉತ್ತರ ಪ್ರದೇಶದಲ್ಲಿ ಕೊಲೆ,ಅತ್ಯಾಚಾರ,ಸುಲಿಗೆ ಎಲ್ಲೆ ಮೀರಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು,ರಾಜ್ಯದಲ್ಲಿ ಸಾಮಾಜಿಕ ಅಸಮಾನತೆಗೆ ಕಾರಣವಾಗಿದೆ.ಹಾಗಾಗಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ತಾಲೂಕು ದಲಿತ ಸಂಘರ್ಷ ಸಮಿತಿಯು ಆಗ್ರಹಿಸಿತು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ನಡೆದ ಧರಣಿಯಲ್ಲಿ ಭಾಗವಹಿಸಿದ್ದ ಧರಣಿ ನಿರತರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.ಉತ್ತರ ಪ್ರದೇಶದ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲು ದಸಂಸ ಒತ್ತಾಯಿಸಿತು.ಈ ಬಗ್ಗೆ ಜಿಲ್ಲಾ ವಿಭಾಗೀಯ ಸಂಚಾಲಕ ಕನ್ನಾಯಕನಹಳ್ಳಿ ಮರಿಸ್ವಾಮಿ ಮಾತನಾಡಿ,ಉತ್ತರ ಪ್ರದೇಶದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ಸಹಜ ಜೀವನ ನಡೆಸಲು ದುಸ್ತರವಾಗಿದ್ದು,ಅವರು ಭಯಭೀತಿಯಿಂದ ಜೀವನ ನಡೆಸುತ್ತಿದ್ದಾರೆ.ರಾಜ್ಯವ್ಯಾಪಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದು,ಮುಸ್ಲಿಂ ಮತ್ತು ದಲಿತ ಯುವಕರ ಕೊಲೆ ನಡೆಯುತ್ತಿದ್ದರೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯಾವುದೇ ಕ್ರಮಕೈಗೊಳ್ಳದೆ ಹಲ್ಲೆಕೋರರಿಗೆ ಬೆಂಗಾವಲಾಗಿದ್ದರೆ.ಹಾಗಾಗಿ ಅಲ್ಲಿನ ಬಿಜೆಪಿ ಸರ್ಕಾರವನ್ನು ರಾಷ್ಟ್ರಪತಿಗಳು ವಜಾಗೊಳಿಸಿಬೇಕು ಎಂದರು.
ತಾಲೂಕು ಸಂಚಾಲಕ ಕೆಂಪಯ್ಯನಹುಂಡಿ ರಾಜು ಮಾತನಾಡಿ,ಜೂನ್ 27ರಂದು ಭೀಮ್ ಆರ್ಮಿಯ ಚಂದ್ರಶೇಖರ್ ಅಜಾದ್ ರಾವಣ್ ಮೇಲೆ ವ್ಯವಸ್ಥಿತ ಗುಂಡಿನ ದಾಳಿ ನಡೆಸಿದ್ದು,ಈ ಕೃತ್ಯದಲ್ಲಿ ಸರ್ಕಾರದ ಕುಮ್ಮಕ್ಕು ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.ಹಾಗಾಗಿ ಅಲ್ಲಿನ ಸರ್ಕಾರವನ್ನು ವಜಾಗೊಳಿಸಬೇಕು.ಗುಂಡಿನ ದಾಳಿ ನಡೆಸಿದವರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಲ್ಲಿನ ದಲಿತ ಮತ್ತು ಮುಸ್ಲಿಂ ಜನಾಂಗಕ್ಕೆ ರಕ್ಷಣೆ ಇಲ್ಲವಾಗಿದ್ದು,ದಲಿತರ ಮೇಲೆ ನಿರಂತರ ಹಲ್ಲೆ ನಡೆಸುತ್ತಿದೆ.
ಆದರೆ,ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ದಲಿತ ಮತ್ತು ಅಲ್ಪಸಂಖ್ಯಾತರಿಗೆ ಸೂಕ್ತ ಭದ್ರತೆ ನೀಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ
ಸರ್ಕಾರವನ್ನು ವಜಾಗೊಳಿಸಬೇಕು ಎಂದು ತಹಶೀಲ್ದಾರ್ ಸಿ.ಜಿ.ಗೀತಾಗೆ ಮನವಿ ಸಲ್ಲಿಸಿದರು
ಧರಣಿಯಲ್ಲಿ ತಾಲೂಕು ಸಂಚಾಲಕ ಮನೋಜ್ ಕುಮಾರ್,ಮಾದಿಗಹಳ್ಳಿ ಮಹೇಶ್,ನಿಲಸೋಗೆ ಕುಮಾರ್,ದಸಂಸ ಮುಖಂಡರಾದ ಪರಶುರಾಮ್ ,ಜಯಣ್ಣ ,ಪ್ರಭಾಕರ್ ,ಶಿವನಂಜು ,ಚಂದ್ರಪ್ಪ ,ಅರ್ಜುನ್ ,ಶಿವರಾಜು ,ಮಹದೇವಯ್ಯ ,ವಿನಯ್, ಮಂಚಯ್ಯ ,ಕೇಶವಮೂರ್ತಿ ಗೋವಿಂದ ಉಮೇಶ್,ಕುಮಾರ್ ,ಸೂರ್ಯ,ಗಣೇಶ್,ರವಿ,ದೊಡ್ಡಯ್ಯ ,ಮಹದೇವಸ್ವಾಮಿ ರವಿಕಾಂತ ,ಮಹದೇವಸ್ವಾಮಿ ,ನವೀನ ,ಪ್ರದೀಪ್ ,ನಂದಕುಮಾರ್ ,ಮಹದೇವಸ್ವಾಮಿ, ಗವಿಸಿದ್ದಯ್ಯ ಇತರರು ಹಾಜರಿದ್ದರು.