ಉತ್ತರ ಗ್ರೀಸ್ ಕಾಡ್ಗಿಚ್ಚು: ೧೮ ವಲಸಿಗರ ಶವ ಪತ್ತೆ

ಗ್ರೀಸ್, ಆ.೨೩- ಕಳೆದ ನಾಲ್ಕು ದಿನಗಳಿಂದ ಉತ್ತರ ಗ್ರೀಸ್‌ನ ಅರಣ್ಯ ಪ್ರದೇಶದಲ್ಲಿ ಭೀಕರ ರೀತಿಯಲ್ಲಿ ಹಬ್ಬುತ್ತಿರುವ ಕಾಡ್ಗಿಚ್ಚಿನ ಪರಿಣಾಮ ಸದ್ಯ ೧೮ ಮೃತದೇಹಗಳು ಪತ್ತೆಯಾಗಿವೆ ಎಂದು ಗ್ರೀಕ್ ಅಗ್ನಿಶಾಮಕ ಸೇವೆ ತಿಳಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಮೃತಪಟ್ಟವರು ವಲಸಿಗರಾಗಿರಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಅಗ್ನಿಶಾಮಕ ದಳದವರು ಕಟ್ಟಡವೊಂದರ ಸುಟ್ಟು ಕರಕಲಾದ ಅವಶೇಷಗಳನ್ನು ಪರಿಶೀಲಿಸಿದಾಗ ಅವಂತಾಸ್ ಗ್ರಾಮದ ಹೊರಗಿನ ಗುಡಿಸಲಿನ ಬಳಿ ಹದಿನೆಂಟು ಮೃತದೇಹಗಳು ಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ. ಸಂತ್ರಸ್ತರು ಗ್ರೀಸ್‌ಗೆ ಅಕ್ರಮವಾಗಿ ಪ್ರವೇಶಿಸಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಗ್ನಿಶಾಮಕ ಸೇವೆಯ ವಕ್ತಾರ ಯಿಯಾನಿಸ್ ಆರ್ಟೋಪಿಯೋಸ್ ಹೇಳಿದ್ದಾರೆ. ಇನ್ನು ನಾಪತ್ತೆಯಾಗಿರುವ ನಿವಾಸಿಗಳ ಬಗ್ಗೆ ಯಾವುದೇ ವರದಿಗಳಿಲ್ಲ ಎನ್ನಲಾಗಿದೆ. ಎರಡು ವಿವಿಧ ಕಡೆಗಳಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ಹಾಗಾಗಿ ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಟರ್ಕಿಯ ಗಡಿಯಿಂದ ಸ್ವಲ್ಪ ದೂರದಲ್ಲಿರುವ ಈಶಾನ್ಯ ಗ್ರೀಸ್‌ನ ಎವ್ರೋಸ್ ಪ್ರದೇಶವು ತೀವ್ರ ಸ್ವರೂಪದ ಕಾಡ್ಗಿಚ್ಚಿನಿಂದಾಗಿ ಧ್ವಂಸಗೊಂಡಿದೆ. ಬೆಂಕಿಯ ಅಬ್ಬರದ ಪರಿಣಾಮ ಅಲೆಕ್ಸಾಂಡ್ರೊಪೊಲಿಸ್ ನಗರದ ಆಸ್ಪತ್ರೆಯನ್ನು ಕೂಡ ಸ್ಥಳಾಂತರಿಸಬೇಕಾಯಿತು. ಮೃತದೇಹಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಮತ್ತು ತನಿಖಾ ತಂಡವು ದಾಡಿಯಾ ಅರಣ್ಯದ ಬಳಿ ಘಟನಾ ಸ್ಥಳಕ್ಕೆ ತೆರಳುತ್ತಿದೆ ಎನ್ನಲಾಗಿದೆ. ಗ್ರೀಸ್‌ನ ಹಲವಾರು ಪ್ರದೇಶಗಳಲ್ಲಿ ಹೆಚ್ಚಿನ ಗಾಳಿ ಹಾಗೂ ೪೦ ಡಿಗ್ರಿ ಸೆಲ್ಸಿಯಸ್ ಮೀರಿದ ಉಷ್ಣತೆಯಿಂದ ಪರಿಸ್ಥಿತಿ ತುಂಬಾ ವಿಕೋಪಕ್ಕೆ ತಿರುಗಿದೆ. ಗಾಳಿಯ ಪರಿಣಾಮ ಕಾಡ್ಗಿಚ್ಚು ಮತ್ತಷ್ಟು ವೇಗದಲ್ಲಿ ಎಲ್ಲೆಡೆ ಹಬ್ಬುತ್ತಿದೆ. ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದು, ಕಾಡ್ಗಿಚ್ಚಿನ ಪರಿಣಾಮ ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.