ಉತ್ತರ ಗಾಜಾದಲ್ಲಿ ಆಹಾರ ಪೂರೈಕೆ ಸ್ಥಗಿತ!

ಗಾಝಾ, ಫೆ.೨೧- ಈಗಾಗಲೇ ಇಸ್ರೇಲ್‌ನ ಭೀಕರ ಆಕ್ರಮಣದಿಂದ ನಲುಗಿರುವ ಗಾಜಾಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಸಂಪೂರ್ಣ ಅವ್ಯವಸ್ಥೆ ಮತ್ತು ಹಿಂಸಾಚಾರದಿಂದ ಕೂಡಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ (ವಿಶ್ವ ಆಹಾರ ಯೋಜನೆ, ಡಬ್ಲ್ಯುಎಫ್‌ಪಿ)ಯಿಂದ ಉತ್ತರ ಗಾಜಾಗೆ ಪೂರೈಕೆಯಾಗುತ್ತಿದ್ದ ಆಹಾರ ವಿತರಣೆಯನ್ನು ಇದೀಗ ತಾತ್ಕಾಲಿಕ ಅವಧಿಗೆ ಅಂತ್ಯಗೊಳಿಸಲಾಗಿದೆ.
ಈ ನಿರ್ಧಾರವನ್ನು ನಾವು ಲಘುವಾಗಿ ತೆಗೆದುಕೊಂಡಿಲ್ಲ. ಯಾಕೆಂದರೆ ಉತ್ತರ ಗಾಜಾದಲ್ಲಿ ನಮ್ಮ ಸಿಬ್ಬಂದಿಯು ತೀವ್ರ ಪ್ರಮಾಣದ ಜನಸಂದಣಿ, ಗುಂಡಿನ ದಾಳಿ ಮತ್ತು ಲೂಟಿಯನ್ನು ಎದುರಿಸಿದ್ದಾರೆ. ಅಲ್ಲದೆ ನಮ್ಮ ಸಿಬ್ಬಂದಿಯು ನಾಗರಿಕ ಸುವ್ಯವಸ್ಥೆಯ ಕುಸಿತದಿಂದಾಗಿ ಸಂಪೂರ್ಣ ಅವ್ಯವಸ್ಥೆ ಮತ್ತು ಹಿಂಸಾಚಾರವನ್ನು ಸಹಿಸಿಕೊಂಡಿದ್ದಾರೆ ಎಂದು ಡಬ್ಲ್ಯುಎಫ್‌ಪಿ ತನ್ನ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದೆ. ಈಗಾಗಲೇ ಕಳೆದ ಡಿಸೆಂಬರ್‌ನಿಂದ ಉತ್ತರ ಗಾಜಾದಲ್ಲಿ ಬರಗಾಲದ ಆತಂಕ ಎದುರಾಗಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿತ್ತು. ಅಲ್ಲದೆ ಉತ್ತರ ಗಾಜಾದಲ್ಲಿ ಉಳಿದುಕೊಂಡಿರುವ ಕನಿಷ್ಠ ೩ ಲಕ್ಷ ಜನರು ತಮ್ಮ ಉಳಿವಿಗಾಗಿ ವಿಶ್ವಸಂಸ್ಥೆಯ ಸಹಾಯವನ್ನು ಅವಲಂಬಿಸಿದ್ದಾರೆ ಎಂದು ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಇರುವ ಯುಎನ್ ಸಂಸ್ಥೆ ಕಳೆದ ತಿಂಗಳು ತಿಳಿಸಿತ್ತು. ಆದರೆ ಸದ್ಯ ಉತ್ತರ ಗಾಜಾಗೆ ನೆರವು ವಿತರಣೆಗಳು ವಿರಳವಾಗಿದ್ದು, ಅದೂ ಅಲ್ಲದೆ ಇಸ್ರೇಲಿ ಮಿಲಿಟರಿಯಿಂದ ಭದ್ರತಾ ಅನುಮತಿಗಳ ಮೇಲೆ ಅವಲಂಬಿತವಾಗಿದೆ. ಹೆಚ್ಚಿನ ಸಂದರ್ಭದಲ್ಲಿ ಸೂಕ್ತ ಪ್ರಮಾಣದ ನೆರವು ವಿತರಣೆಗೆ ಇಸ್ರೇಲಿ ಮಿಲಿಟರಿಗಳು ಅನುಮತಿ ನೀಡುತ್ತಿಲ್ಲ ಎಂಬ ಆರೋಪ ಕೂಡ ಈ ನಡುವೆ ವ್ಯಕ್ತವಾಗಿದೆ. ಅಲ್ಲದೆ ಇಲ್ಲಿ ಹಲವೆಡೆಗಳಲ್ಲಿ ನಿರಾಶ್ರಿತರು ಗುಂಪು ವಿತರಣಾ ಕೇಂದ್ರಗಳ ಮೇಲೆ ಲಗ್ಗೆ ಇಟ್ಟು ಲೂಟಿ ನಡೆಸುತ್ತಿದ್ದಾರೆ ಎಂದು ಕೂಡ ಹೇಳಲಾಗಿದೆ. ಈ ಎಲ್ಲಾ ವಿಚಾರಗಳ ನಡುವೆ ಇದೀಗ ಉತ್ತರ ಗಾಜಾದಲ್ಲಿ ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆಯು ತನ್ನ ಕಾರ್ಯಕ್ರಮವನ್ನು ತಾತ್ಕಾಲಿಕ ಅವಧಿಗೆ ಅಂತ್ಯಗೊಳಿಸಿರುವುದು ಸಹಜವಾಗಿಯೇ ದೊಡ್ಡ ದುರಂತ ಎಂದೇ ಹೇಳಲಾಗಿದೆ.