ಉತ್ತರ ಕ್ಷೇತ್ರದ ಗ್ರಾಮೀಣದಲ್ಲಿ ನಾಗರಾಜ್ ಲೋಕಿಕೆರೆ ಮಿಂಚಿನ ಪ್ರಚಾರ

ದಾವಣಗೆರೆ.ಏ.೨೩ : ಸಮಾಜ ಸೇವಕರು, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರು ಆದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರು ಇಂದು ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಮಿಂಚಿನ ಪ್ರಚಾರ ನಡೆಸಿದರು.ಮೊದಲಿಗೆ ಕಾಡಜ್ಜಿ ಗ್ರಾಮಕ್ಕೆ ತೆರಳಿ ಅಲ್ಲಿನ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ಪ್ರಮುಖರು, ಮುಖಂಡರು, ಬಿಜೆಪಿ ಮುಖಂಡರು, ಕಾರ್ಯಕರ್ತರ ಜೊತೆಗೂಡಿ ಮತ ಪ್ರಚಾರ ಆರಂಭಿಸಿದರು. ಇದಕ್ಕೂ ಮುನ್ನ ಶಾಸಕರಾದ ಎಸ್.ಎ. ರವೀಂದ್ರನಾಥ್ ಅವರು ಆಂಜನೇಯ ದೇವರಿಗೆ ಪೂಜೆ ಸಲ್ಲಿಸಿ ನಾಗರಾಜ್ ಲೋಕಿಕೆರೆ ಅವರ ಗೆಲುವಿಗೆ ಶುಭಾಶೀರ್ವಾದ ನೀಡಿದರು.ತೆರೆದ ವಾಹನವಿದ್ದರೂ ಬಳಸದೇ ಕಾಲ್ನಡಿಗೆಯಲ್ಲಿ ಗ್ರಾಮೀಣ ಮತದಾರರ ಬಳಿ ತೆರಳಿ ಮತಯಾಚಿಸಿದರು. ಬೋವಿಹಟ್ಟಿ ಯಲ್ಲಿನ ಶ್ರೀ ದೊಡ್ಡಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮುಂದಿನ ಪ್ರಚಾರ ಕೈಗೊಂಡರು.ಮುಸ್ಲಿಂ ಕಾಲೋನಿಗೆ ತೆರಳಿದಾಗ ರಂಜಾನ್ ಸಂಭ್ರಮದಲ್ಲಿದ್ದ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ತಿಳಿಸಿ ಅಲ್ಲಿರುವ ಹಜರತ್ ಸೈಯದ್ ಚಮನ್ ಷಾ ವಾಲಿ ಚಿಪ್ತಿ ಗೆ (ದರ್ಗಾ) ತೆರಳಿ ಅಲ್ಲಾ ದೇವರಿಗೆ ಚಾದರ್ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಜೊತೆಗೆ ಮುಸ್ಲಿಂ ಮುಖಂಡರು, ಪ್ರಮುಖರ ಜೊತೆಗೆ ಮುಸ್ಲಿಂ ಕಾಲೋನಿ ಸುತ್ತಮುತ್ತ ಪ್ರಚಾರ ನಡೆಸಿ ಮತ ನೀಡುವಂತೆ ಮನವಿ ಮಾಡಿದರು.