ಉತ್ತರ ಕ್ಷೇತ್ರದಲ್ಲಿ ಪ್ರತಿ ಮತದಾರರೊಂದಿಗೆ ಸಂಪರ್ಕದಲ್ಲಿದ್ದು ಬಿಜೆಪಿ ಟಿಕೆಟ್ ಸಿಕ್ಕರೆ ಗೆಲುವು ಖಚಿತ: ಬಿರಾದಾರ್

ಕಲಬುರಗಿ,ಜ.11: ಉತ್ತರ ಕ್ಷೇತ್ರದಲ್ಲಿ ನಾನು ಪ್ರತಿ ಮನೆ ಹಾಗೂ ಪ್ರತಿ ಮತದಾರರೊಂದಿಗೆ ನಿರಂತರ ಸಂಪರ್ಕ ಸಾಧಿಸಿದ್ದು, ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊಟ್ಟರೆ ಖಂಡಿತ ಗೆಲ್ಲುತ್ತೇನೆ ಎಂದು ಬಿಜೆಪಿ ಹಿರಿಯ ಮುಖಂಡ ಸುಭಾಷ್ ಬಿರಾದಾರ್ ಕಮಲಾಪೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿಯೂ ಸಹ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದಾಗ್ಯೂ, ಕೆಲ ವ್ಯತ್ಯಾಸಗಳಿಂದಾಗಿ ನನಗೆ ಟಿಕೆಟ್ ಕೊಡಲಿಲ್ಲ. ಆದಾಗ್ಯೂ, ಕಳೆದ ಚುನಾವಣೆಯಲ್ಲಿ ಬಿಜೆಪಿ ಕೆಲವು ಮತಗಳ ಅಂತರದಿಂದ ಪರಾಭವಗೊಂಡಿತು. ಹಿಂದೂಗಳ ಮತಗಳನ್ನು ಒಟ್ಟುಗೂಡಿಸುವಲ್ಲಿ ವಿಫಲವಾಗಿದ್ದರಿಂದ ಮತಗಳ ವಿಭಜನೆಯಿಂದಾಗಿ ಸ್ವಲ್ಪದರಲ್ಲಿಯೇ ಬಿಜೆಪಿ ಗೆಲುವಿನಿಂದ ತಪ್ಪಿಸಿಕೊಂಡಿತು ಎಂದರು.
ಉತ್ತರ ಕ್ಷೇತ್ರದಲ್ಲಿ ಶೇಕಡಾ 70ರಷ್ಟು ಗ್ರಾಮೀಣ ಮತದಾರರಿದ್ದಾರೆ. ನಾನು ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಅತ್ಯಂತ ಸಶಕ್ತವಾಗಿ ಸಂಘಟಿಸಿದ್ದೇನೆ. ಕಮಲಾಪುರ, ಚಿಂಚೋಳಿ, ಆಳಂದ್, ಸೇಡಂ, ಬಸವಕಲ್ಯಾಣ್, ಬೀದರ್, ಹುಮ್ನಾಬಾದ್ ನಿವಾಸಿಗಳೂ ಸಹ ಉತ್ತರ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೇ ನಗರದ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿಯಂತೂ ನಾನು ನಿರಂತರವಾಗಿ ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದೇನೆ. ಹೀಗಾಗಿ ಉತ್ತರ ಕ್ಷೇತ್ರದಲ್ಲಿ ಕೇವಲ ಹಿಂದೂಗಳು ಅಷ್ಟೇ ಅಲ್ಲದೇ ಅಲ್ಪಸಂಖ್ಯಾತರ ಮುಸ್ಲಿಂ ಸಮುದಾಯದ ಮತಗಳನ್ನೂ ಸಹ ಪಡೆಯಬಲ್ಲೆ ಎಂದು ಅವರು ಹೇಳಿದರು.
ಅವಿಭಜಿತ ಕಲಬುರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ದಿ. ಚಂದ್ರಶೇಖರ್ ಪಾಟೀಲ್ ರೇವೂರ್ ಅವರು ಸತತವಾಗಿ ಎರಡು ಬಾರಿ ಶಾಸಕರಾದರು. ಕಮಲಾಪುರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ರೇವು ನಾಯಕ್ ಬೆಳಮಗಿ ಅವರು ಸತತವಾಗಿ ನಾಲ್ಕು ಬಾರಿ ಶಾಸಕರಾದರು. ಅವರ ಗೆಲುವಿನಲ್ಲಿ ನಾನೂ ಪ್ರಮುಖ ಪಾತ್ರ ವಹಿಸಿದ್ದೆ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿ ಪಕ್ಷವನ್ನು ಕಟ್ಟಿದಾಗ ನಾನು ಅವರೊಂದಿಗೆ ಇದ್ದೆ. ಆ ಸಂದರ್ಭದಲ್ಲಿ ಉತ್ತರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ನಾಸೀರ್ ಹುಸೇನ್ ಉಸ್ತಾದ್ ಅವರ ಗೆಲುವಿಗಾಗಿ ಉತ್ತರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದೆ. ಹೀಗಾಗಿ ಅಲ್ಪಸಂಖ್ಯಾತರ ಮತದಾರರೂ ಸಹ ನನಗೆ ಚಿರಪರಿಚಿತರಾಗಿದ್ದಾರೆ. ನನಗೆ ಬಿಜೆಪಿ ಟಿಕೆಟ್ ಕೊಟ್ಟಲ್ಲಿ ಮುಸ್ಲಿಂ ಸಮುದಾಯದ ಮತಗಳನ್ನೂ ಸಹ ಪಡೆಯುವೆ ಎಂದು ಅವರು ತಿಳಿಸಿದರು.
ನಾನು ಕೆಎಸ್‍ಎಫ್‍ಸಿ ಅಧಿಕಾರಿ ಸ್ಥಾನಕ್ಕೆ ಬಿಜೆಪಿ ಪಕ್ಷದ ಮುಖಂಡರ ಸೂಚನೆಯ ಮೇರೆಗೆ ರಾಜೀನಾಮೆ ಕೊಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೇಂದ್ರದ ಮಾಜಿ ಸಚಿವ ದಿ. ಅನಂತಕುಮಾರ್, ಮಾಜಿ ಸಂಸದ ಡಾ. ಬಸವರಾಜ್ ಪಾಟೀಲ್ ಸೇಡಂ, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ದಿ. ಡಾ. ಎಂ.ಆರ್. ತಂಗಾ ಅವರಂತಹ ನಾಯಕರ ಮಾರ್ಗದರ್ಶನದಲ್ಲಿ ಕೇವಲ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಕಲ್ಯಾಣ ಕರ್ನಾಟಕದ ಬೀದರ್, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿಯೂ ಸಹ ಪಕ್ಷವು ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿರುವೆ. ಅಲ್ಲದೇ ತೆಲಂಗಾಣ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆ ರಾಜ್ಯದಲ್ಲಿ ಮೂರು ತಿಂಗಳವರೆಗೆ ಪಕ್ಷದ ವರಿಷ್ಠರ ನಿರ್ದೇಶನದಂತೆ ವಾಸ್ತವ್ಯ ಹೂಡಿ ಪಕ್ಷವನ್ನು ಕಟ್ಟಿದ್ದೇನೆ ಎಂದು ಬಿರಾದಾರ್ ಅವರು ಹೇಳಿದರು.
30 ವರ್ಷಗಳ ಸುದೀರ್ಘ ಅವಧಿಯವರೆಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ನಿರೀಕ್ಷಿಸದೇ ಕಾರ್ಯನಿರ್ವಹಿಸಿರುವೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ನನಗೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ವಿಮಾನ ನಿಲ್ದಾಣದ ಪ್ರದೇಶದಲ್ಲಿ ಬೃಹತ್ ಸಾಧನಾ ಸಮಾವೇಶವನ್ನು ಮಾಡಲಾಯಿತು. ಅಲ್ಲದೇ ನನಗೆ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಲಾಗಿತ್ತು. ಕೆಲವೇ ಮತಗಳ ಅಂತರದಿಂದ ಗೆಲುವು ಸಾಧ್ಯವಾಗಲಿಲ್ಲ. ಅದೇ ರೀತಿ ಕಲಬುರ್ಗಿ- ಯಾದಗಿರಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿಯೂ ಸಹ ಪಕ್ಷದ ಶಕ್ತಿ ಏನೂ ಇರಲಿಲ್ಲ. ಆದಾಗ್ಯೂ, ನಾನು ಸ್ಪರ್ಧಿಸಿ ಸುಮಾರು 2000 ಮತಗಳನ್ನು ಪಡೆದೆ. ನಂತರ ಪಕ್ಷದ ಅಭ್ಯರ್ಥಿ ಎರಡನೇ ಬಾರಿಗೆ ಗೆದ್ದಿದ್ದು, ಆ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ ಪಕ್ಷ ಬಲಗೊಳ್ಳಲು ಕಾರಣವಾಗಿದೆ ಎಂದು ಅವರು ತಿಳಿಸಿದರು.
ನಾನು ಯಾವುದೇ ನಿಗಮ ಮಂಡಳಿಯನ್ನು ಕೇಳಲಿಲ್ಲ. ಹೀಗಾಗಿ ಉತ್ತರ ಕ್ಷೇತ್ರದಲ್ಲಿ ಎರಡು ಬಾರಿ ಟಿಕೆಟ್ ಕೇಳಿದ್ದೆ. ಕೊಟ್ಟಿಲ್ಲ. ಈ ಬಾರಿ ನನಗೆ ಟಿಕೆಟ್ ಕೊಡುವರೆಂಬ ವಿಶ್ವಾಸ ಇದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಣ್ಣಾರಾವ್ ಪಾಟೀಲ್, ಅಮೃತಪ್ಪ ಬಿರಾದಾರ್, ನ್ಯಾಯವಾದಿ ರಾಜಶೇಖರ್ ರಾಜೇಶ್ವರ್ ಡೊಂಗರಗಾಂವ್, ಗುತ್ತಿಗೆದಾರ ಮುರುಳೀಧರರಾವ್ ಮುಂತಾದವರು ಉಪಸ್ಥಿತರಿದ್ದರು.