ಉತ್ತರ ಕ್ಷೇತ್ರಕ್ಕೆ ಬಿಜೆಪಿಯಿಂದ ಚಂದು ಪಾಟೀಲ್ ಕಣಕ್ಕೆ: ಉತ್ತರ ಮಂಡಲದ ಒಮ್ಮತದ ನಿರ್ಧಾರ

ಕಲಬುರಗಿ,ಜ.20: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಮತಕ್ಷೇತ್ರದಲ್ಲಿ ಮತ್ತೆ ಬಿಜೆಪಿಯಿಂದ ಚಂದು ಪಾಟೀಲ್ ಅವರಿಗೆ ಟಿಕೆಟ್ ಸಿಗಲಿದೆ ಎಂದು ಉತ್ತರ ಮಂಡಲದ ಅಧ್ಯಕ್ಷ ಅಶೋಕ್ ಮಾನಕರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಗೆಲುವು ಕೈತಪ್ಪಿದೆ. ಆದಾಗ್ಯೂ, ಈ ಬಾರಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವಲ್ಲಿ ಚಂದು ಪಾಟೀಲ್ ಅವರು ಯಶಸ್ವಿಯಾಗಿದ್ದು, ಈ ಬಾರಿ ಅವರ ಗೆಲುವು ಖಚಿತವಾಗಿದೆ ಎಂದರು.
ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಚಂದು ಪಾಟೀಲ್ ಅವರ ಕೈತಪ್ಪುತ್ತದೆ ಎಂಬುದು ಕಿಡಿಗೇಡಿಗಳ ಸುಳ್ಳು ವದಂತಿಯಾಗಿದೆ. ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿಕೊಂಡು ಬರಲು ಚಂದು ಪಾಟೀಲ್ ಅವರು ಸರ್ವ ಪ್ರಯತ್ನಗಳನ್ನು ಮಾಡಿದ್ದಾರೆ. ಈ ಬಾರಿಯೂ ಸಹ ಅವರಿಗೆ ಟಿಕೆಟ್ ಸಿಗಲಿದೆ ಎಂದು ಅವರು ಹೇಳಿದರು.
ಇನ್ನು ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಬೂತ್ ವಿಜಯ್ ಅಭಿಯಾನಾ ಯಶಸ್ವಿಯಾಗಿ ಮುಂದುವರೆದಿದೆ. ಈಗಾಗಲೇ 285 ಬೂತಗಳಿದ್ದು, 154 ಬೂತಗಳಲ್ಲಿ ಸುಮಾರು ಹತ್ತು ಸಾವಿರ ಮನೆಗಳ ಮೇಲೆ ಬಿಜೆಪಿ ಧ್ವಜಗಳನ್ನು ಹಾರಿಸಲಾಗಿದೆ. ಅದರಂತೆ 1850 ನೂತನವಾಗಿ ಪೇಜ್ ಪ್ರಮುಖರು ರಚನೆ ಮಾಡಲಾಗಿದೆ. ಬೂತ್ ಅಧ್ಯಕ್ಷರು, ಬೂತ್ ಸಮಿತಿ, ವಾಟ್ಸಪ್ ಗ್ರೂಪ್‍ಗಳನ್ನು 154 ಬೂತಗಳಲ್ಲಿ ರಚನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ವಇಜಯ್ ಸಂಕಲ್ಪ ಅಭಿಯಾನದಡಿ ಉತ್ತರ ಮತಕ್ಷೇತ್ರದಲ್ಲಿ ಒಟರಟು 284 ಬೂತ್‍ಗಳಿದ್ದು, ಬೂತನಲ್ಲಿರುವ ಎಲ್ಲ ಮನೆಗಳ ಸಂಪರ್ಕ ಮಾಡುವುದು, ಪ್ರತಿ ಮನೆಗೆ ಸರ್ಕಾರದ ಸಾಧನೆಗಳು ಮತ್ತು ಕರಪತ್ರ ಹಾಗೂ ಸ್ಟಿಕರ್ ವಿತರಿಸುವುದು, ಸದಸ್ಯತ್ವ ಅಭಿಯಾನ (ಮಿಸ್ ಕಾಲ ಕೊಡುವ ಮೂಲಕ), ಫಲಾನುಭವಿಗಳನ್ನು ಸಂಪರ್ಕಿಸುವ ಕೆಲಸ ಮುಂದುವರೆದಿದೆ ಎಂದು ಅವರು ಹೇಳಿದರು.
ಪ್ರತಿ ಬೂತ್ ವ್ಯಾಪ್ತಿಯಲ್ಲಿ ಹತ್ತು ಗೋಡೆ ಬರಹಗಳು ಹಾಗೂ ಒಂದು ಡಿಜಿಟಲ್ ಗೋಡೆ ಬರಹವನ್ನು ಮಾಡಲಾಗುವುದು. ಗೋಡೆ ಬರಹಗಳನ್ನು ರಾಜ್ಯದಿಂದ ಕಳಿಸಲಾಗುವುದು. ಜನವರಿ 29ರಂದು ಮನ್ ಕೀ ಬಾತ್ ಎಲ್ಲ ಬೂತಗಳಲ್ಲಿ ವೀಕ್ಷಣೆ ಮಾಡಲಾಗುವುದು. ಮನೆ, ಮನೆಗೆ ಶೌಚಾಲಯ ನಿರ್ಮಾಣ, ವಿದ್ಯುತ್, ಉಜ್ವಾಲಾ ಯೋಜನೆ, ಜನಧನ್, ಅನ್ನಭಾಗ್ಯ ಯೋಜನೆ, ಗ್ಯಾಸ್, ಆಯುಷ್ಮಾನ್ ಯೋಜನೆ, ಅಟಲ್ ಪಿಂಚಣಿ ಯೋಜನೆ, ಕಳೆದ 2019ರಲ್ಲಿ ಕೋವಿಡ್ ಮಹಾಮಾರಿ ಸಮಯದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಯೋಜನೆ ಮುಂತಾದ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.
ಜನವರಿ 21ರಂದು ನಗರದ ಮಹಾತ್ಮಾ ಬಸವೇಶ್ವರ್ ಕಾಲೋನಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಅಭಿಯಾನದ ಕಾಲ್ನಡಿಗೆ ಜಾಥಾವು ಮುಖಂಡ ಚಂದು ಪಾಟೀಲ್ ಅವರ ನೇತೃತ್ವದಲ್ಲಿ ಜರುಗಲಿದೆ. ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರೂ ಸೇರಿದಂತೆ ಮುಖಂಡರು ಹಾಗೂ ಸುಮಾರು 2000 ಕಾರ್ಯಕರ್ತರು ಪಾಲ್ಗೊಳ್ಳುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜನತಾ ಬಜಾರ್ ಅಧ್ಯಕ್ಷ ದತ್ತು ಫಡ್ನಿಸ್, ಉಪಾಧ್ಯಕ್ಷ ಶಿವಲಿಂಗ್ ಹಳಿಮನಿ, ವರದಾಶಂಕರ್ ಶೆಟ್ಟಿ, ಶಾಂತಕುಮಾರ್ ದುಧನಿ ಮುಂತಾದವರು ಉಪಸ್ಥಿತರಿದ್ದರು.