ಉತ್ತರ ಕೊರಿಯಾದ ಪರಮಾಣು ಜಲಾಂತರ್ಗಾಮಿ ಅನಾವರಣ

ಪ್ಯಾಂಗ್ಯೊಂಗ್ (ಉತ್ತರ ಕೊರಿಯಾ), ಸೆ.೮- ಪದೇ ಪದೇ ಖಂಡಾಂತರ ಕ್ಷಿಪಣಿ ಪರೀಕ್ಷೆಗಳ ಮೂಲಕ ನೆರೆರಾಷ್ಟ್ರಗಳಿಗೆ ಬೆದರಿಕೆ ಒಡ್ಡುತ್ತಿರುವ ಉತ್ತರ ಕೊರಿಯಾ ಇದೀಗ ತನ್ನ ಮಿಲಿಟರಿ ರಣನೀತಿಯಲ್ಲಿ ಮತ್ತೊಂದು ಮಹತ್ತರ ಹೆಜ್ಜೆಯನ್ನಿರಿಸಿದೆ. ಇದೇ ಮೊದಲ ಬಾರಿಗೆ ಉತ್ತರ ಕೊರಿಯಾವು ತನ್ನ ಯುದ್ಧತಂತ್ರದ ಪರಮಾಣು ಆಧಾರಿತ ಜಲಾಂತರ್ಗಾಮಿ (ಸಬ್‌ಮೆರಿನ್)ಯನ್ನು ಅನಾವರಣಗೊಳಿಸಿದೆ. ಕೊರಿಯನ್ ಪರ್ಯಾಯ ದ್ವೀಪ ಮತ್ತು ಜಪಾನ್ ನಡುವಿನ ನೀರಿನಲ್ಲಿ ಗಸ್ತಿಗೆ ನೌಕಾಪಡೆ ನಿಯೋಜಿಸಿದೆ.
ಬುಧವಾರ ನಡೆದ ಪರಮಾಣು ಆಧಾರಿತ ಸಬ್‌ಮೆರಿನ್ ಅನಾವರಣ ಕಾರ್ಯಕ್ರಮದಲ್ಲಿ ಉತ್ತರ ಕೊರಿಯಾ ಮುಖ್ಯಸ್ಥ ಕಿಮ್ ಜೊಂಗ್ ಉನ್ ಅವರು ಭಾಗವಹಿಸಿ, ಎಲ್ಲಾ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನೌಕಾಪಡೆಯನ್ನು ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ಸಜ್ಜುಗೊಳಿಸುವುದು ತುರ್ತು ಕಾರ್ಯವಾಗಿದೆ. ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ ನೀರೊಳಗಿನ ಹಾಗೂ ಮೇಲ್ಮೈ ಹಡಗುಗಳನ್ನು ನೌಕಾ ಪಡೆಗಳಿಗೆ ವರ್ಗಾಯಿಸಲಾಗುವುದು. ಜಲಾಂತರ್ಗಾಮಿ ಉಡಾವಣಾ ಸಮಾರಂಭವು ಉತ್ತರ ಕೊರಿಯಾದ ನೌಕಾ ಪಡೆಯನ್ನು ಹೆಚ್ಚಿಸಲು ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ಕೆಸಿಎನ್‌ಎ ವರದಿ ಮಾಡಿದೆ. ಉತ್ತರ ಕೊರಿಯಾವು ತನ್ನ ಅಸ್ತಿತ್ವದಲ್ಲಿರುವ ಜಲಾಂತರ್ಗಾಮಿ ನೌಕೆಗಳನ್ನು ಪರಮಾಣು ಶಸ್ತ್ರಾಸ್ತ್ರ-ಸಶಸ್ತ್ರ ದಾಳಿ ಜಲಾಂತರ್ಗಾಮಿಗಳಾಗಿ ಪರಿವರ್ತಿಸಲು ಯೋಜಿಸಿದೆ ಮತ್ತು ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ತನ್ನ ವೇಗವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಕಿಮ್ ತಿಳಿಸಿದ್ದಾರೆ. ಇನ್ನು ಸಬ್‌ಮೆರಿನ್‌ನಲ್ಲಿ ಯಾವ ರೀತಿಯ ಕ್ಷಿಪಣಿಗಳನ್ನು ಅಳವಡಿಸಲಾಗುವುದು ಎಂಬುವುದರ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸಹಜವಾಗಿಯೇ ಉತ್ತರ ಕೊರಿಯಾ ಈ ನೀತಿ ಅಮೆರಿಕಾಗೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.