ಉತ್ತರ ಕರ್ನಾಟಕದಲ್ಲೂ ವರುಣನ ಅಬ್ಬರ ಜನಜೀವನ ಅಸ್ತವ್ಯಸ್ತ

ಬೆಂಗಳೂರು, ಜು. ೧೪-ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಹಾಮಳೆಯ ರುದ್ರನರ್ತನ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಡಗು, ಚಿಕ್ಕಮಗಳೂರು, ಮಂಡ್ಯ, ಯಾದಗಿರಿ, ವಿಜಯಪುರ, ಬೆಳಗಾವಿ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ.
ವರುuನ ಆರ್ಭಟದಿಂದಾಗಿ ಹಲವೆಡೆ ದೇಗುಲ, ಮಂಟಪ ಜಲಾವೃತಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಇಂದು ಕೊಂಚ ಬಿಡುವು ನೀಡಿದೆ. ಆದರೆ ಮಂಗಳೂರಿನ ಸಮುದ್ರ ತೀರದಲ್ಲಿ ನಿರಂತರ ಮಳೆಯಾಗುತ್ತಿದೆ. ಮುಂದಿನ ೪೮ ಗಂಟೆಗಳ ಅವಧಿಯಲ್ಲಿ ರಾಜ್ಯದ ಬಹುತೇಕ ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಭಾಗಮಂಡಲ -ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಮರಗಳು ರಸ್ತೆಗೆ ಉರುಳಿ ಬಿದ್ದಿದೆ. ಮಡಕೇರಿ ತಾಲ್ಲೂಕಿನ ಭಾಗಮಂಡಲ ತಲಕಾವೇರಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಜನರು ಪರದಾಡುವಂತಾಗಿದೆ. ಶ್ರೀಮಂಗಲ- ನಾಲ್ಕೇರಿ ಗ್ರಾಮ ಸಂಪರ್ಕ ಜಲಾವೃತಗೊಂಡಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದ್ದು, ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಕೇರಳದ ವಯನಾಡು, ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕಬಿನಿ ಜಲಾಶಯ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಹಾಸನ ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದು ಎಡೆಬಿಡದೆ ಮಳೆಯಾಗುತ್ತಿದೆ. ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಇಂದು ಆಲೂರು, ಸಕಲೇಶಪುರ ಅರಕಲಗೂಡು ತಾಲ್ಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಹಾಸನ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ ೭೫ ರ ಕೆಳಭಾಗದಲ್ಲಿ ಭೂಕುಸಿತ ಸಂಭವಿಸಿದ್ದು, ಈ ಭಾಗದಲ್ಲಿ ಭಾರೀ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಸಕಲೇಶಪುರ ಉಪವಿಭಾಗಾಧಿಕಾರಿ ಪ್ರತೀಕ್ ಭಾಯಲ್ ಪರಿಶೀಲನೆ ನಡೆಸಿದರು. ಕೆಎಸ್‌ಆರ್‌ಟಿಸಿ ಸೇರಿದಂತೆ ಪ್ರಯಾಣಿಕ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಮಲೆನಾಡಿನಲ್ಲೂ ಮಳೆರಾಯನ ಆರ್ಭಟ ಕಡಿಮೆಯಾಗಿಲ್ಲ. ಕುಮದ್ವತಿ, ವರದ ತುಂಗಭದ್ರ ನದಿಗಳು ತುಂಬಿ ಹರಿಯುತ್ತಿದೆ. ಜಲಾಪ್ರಳಯಕ್ಕೆ ಐಸಿಹಾಸಿಕ ಮಂಟಪಗಳು ಮುಳುಗಿ ಹೋಗಿವೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಶ್ರೀಕೃಷ್ಣದೇವರಾಯ ಸಮಾಧಿ ಮಂಟಪ ಮುಳುಗಡೆಯಾಗಿದೆ. ಇಂದು ನಡೆಯಬೇಕಾಗಿದ್ದ ರಘುವರ್ಮ ಮಹೋತ್ಸವ ರದ್ದುಪಡಿಸಲಾಗಿದೆ.
ಮಳೆ ಮತ್ತು ಪ್ರವಾಹದಿಂದ ಐತಿಹಾಸಿಕ ಹಂಪಿಯ ಪುರಂದರ ಮಂಟಪ, ರಾಮಲಕ್ಷ್ಮಣ, ಚಕ್ರತೀರ್ಥ ಮಂಟಪ ಜಲಾವೃತಗೊಂಡಿದೆ. ಪ್ರವಾಸಿಗರು ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಕಲ್ಬುರ್ಗಿ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಬೆಳಗಾವಿ ಜಿಲ್ಲೆಯ ಖಾನಪುರ ತಾಲೂಕಿನ ಭೀಮಘಡ, ವನ್ಯಧಾಮದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಿಂಧನೂರು- ಹೆಮ್ಮಡಗ ರಾಜ್ಯ ಹೆದ್ದಾರಿ ಸೇತುವೆ ಮೇಲೆ ನೀರು ಹರಿದು ಕರ್ನಾಟಕ- ಗೋವಾ ಸಂಪರ್ಕ ಕಡಿದು ಹೋಗಿದೆ.ಮೈತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಈಜಲು ಹೋದ ಮೂವರು ಯುವಕರಲ್ಲಿ ಓರ್ವ ನೀರಿನ ರಭಸಕ್ಕೆ ಕೊಚ್ಚಿಹೋದ ಘಟನೆ ನಂಜನಗೂಡು ತಾಲೂಕಿನ ಹೆಜ್ಜಿಗೆ ಗ್ರಾಮದ ಬಳಿ ನಡೆದಿದೆ.
ನದಿಯಲ್ಲಿ ಅಧಿಕ ನೀರು ಹರಿದು ಬರುತ್ತಿದ್ದರೂ ಅಪಾಯ ಲೆಕ್ಕಿಸದೆ ಮೂವರು ಯುವಕರು ಈಜಲು ತೆರಳಿದ್ದರು.
ಹೆಜ್ಜಿಗೆ ಸೇತುವೆ ಬಳಿ ಯುವಕರು ನದಿಗೆ ಹಾರಿದ್ದು, ನೀರಿನ ರಭಸಕ್ಕೆ ಅಹಮದ್ ಕರೀಂ ಎಂಬಾತ ನಾಪತ್ತೆಯಾಗಿದ್ದು, ಉಳಿದಿಬ್ಬರು ಈಜಿ ದಡ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.