ಉತ್ತರ ಕನ್ನಡ ಮಲೆನಾಡಿನಲ್ಲಿ ಪ್ರವಾಹ ಇನ್ನೆರೆಡು ದಿನ ಮಳೆ

ಬೆಂಗಳೂರು,ಜು.೧೭- ಉತ್ತರ ಕನ್ನಡ, ಬೆಳಗಾವಿ, ಯಾದಗಿರಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಮತ್ತು ಪ್ರವಾಹ ಮುಂದುವರೆದಿದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಜಮೀನುಗಳು ಜಲಾವೃತಗೊಂಡಿವೆ.
ರಾಜ್ಯದ ವಿವಿಧೆಡೆ ಇಂದು ಮತ್ತು ನಾಳೆ ಭಾರಿ ಮಳೆಯಾಗುತ್ತಿದ್ದು, ಮಂಗಳವಾರದಿಂದ ಮಳೆ ಪ್ರಮಾಣ ಇಳಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ನಾಳೆಯೂ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗ ಪ್ರತಿ ಗಂಟೆಗೆ ೪೦ ರಿಂದ ೫೦ ಕಿ.ಮೀ ಬೀಸಲಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಇಲಾಖೆ ಸೂಚಿಸಿದೆ. ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದ್ದು, ಇನ್ನೂ ಎರಡು ದಿನಗಳು ಇದೇ ವಾತಾವರಣ ಮುಂದುವರೆಯಲಿದ್ದು, ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.ಮುಂದಿನ ೪೮ ಗಂಟೆಗಳಲ್ಲಿ ರಾಜ್ಯದ ಬಹುತೇಕ ಕಡೆ ಮಳೆಯಾಗಲಿದ್ದು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬೀದರ್, ಕಲಬುರಗಿ, ಬೆಳಗಾವಿ ಹಾಗೂ ಹಾಸನ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಹೊಸಪೇಟೆಯ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ನದಿಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಮಹಾರಾಷ್ಟ್ರದ ವಿವಿಧೆಡೆ ಮಳೆ ಸುರಿಯುತ್ತಿದ್ದು, ಕೃಷ್ಣಾ ಮತ್ತು ಗೋಧಾವರಿ ನದಿಗಳು ಉಕ್ಕಿ ಹರಿಯುತ್ತಿವೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಲವು ಜಲಾಶಯಗಳು ಭರ್ತಿಯಾಗಿದ್ದು, ನದಿಗೆ ನೀರು ಬಿಡಲಾಗುತ್ತಿದೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತುಂಗ, ಭದ್ರಾ, ಹೇಮಾವತಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಶೃಂಗೇರಿ, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಕಳಸಾ ಭಾಗದಲ್ಲಿ ಮಳೆ ಮುಂದುವರೆದಿದ್ದು, ಕೆರೆ ಕಟ್ಟೆಗಳು ಉಕ್ಕಿ ಹರಿಯುತ್ತಿವೆ. ಮಳೆ ಹಿನ್ನೆಲೆಯಲ್ಲಿ ಜನರು ಹೊರಗಡೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕೃಷಿ ಚಟುವಟಿಕೆಗಳಿಗೂ ಹಿನ್ನೆಡೆಯಾಗಿದ್ದು, ಹಲವೆಡೆ ಗುಡ್ಡ ಕುಸಿದು ರಸ್ತೆಗಳಿಗೆ ಹಾನಿಯಾಗಿದೆ. ಮರಗಳು ಉರುಳಿ ಬಿದ್ದಿರುವುದರಿಂದ ಗ್ರಾಮಗಳ ಸಂಪರ್ಕ ಕಡಿದುಹೋಗಿದೆ.
ಅನೇಕ ಮರಗಳು ಉರುಳಿ ಬಿದ್ದಿವೆ. ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗಗಳಲ್ಲಿ ಮಳೆ ಕೊಂಚ ಬಿಡುವು ನೀಡಿದೆ. ಆದರೆ, ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಮೋಡ ಮುಸುಕಿದ ವಾತಾವರಣವಿದೆ. ಇದುವರೆಗೆ ಜಿಲ್ಲೆಯಲ್ಲಿ ೩೫ ಮನೆಗಳು ಹಾನಿಯಾಗಿವೆ. ೪ ಮನೆಗಳು ಕುಸಿದು ಬಿದ್ದಿವೆ.

ಸಂಚಾರ ಬಂದ್
ಜಿಲ್ಲೆಯಲ್ಲಿ ಮಳೆ ಅನಾಹುತ ಮುಂದುವರೆದಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ತಡೆಗೋಡೆ ಕುಸಿಯುವ ಭೀತಿ ಎದುರಾಗಿದೆ. ಇದರಿಂದಾಗಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ೨೭೫ನ್ನು ಕಳೆದ ರಾತ್ರಿಯಿಂದಲೆ ಮುನ್ನೆಚ್ಚೆರಿಕೆ ಕ್ರಮವಾಗಿ ಮಡಿಕೇರಿ ಟೋಲ್‌ಗೇಟ್ ಬಳಿಯೇ ಬಂದ್ ಮಾಡಿ ಬ್ಯಾರಿಕೇಡ್ ಅಳವಡಿಸಿದ್ದಾರೆ.
ಮಡಿಕೇರಿ ಮತ್ತು ಮಂಗಳೂರು ನಡುವೆ ಸಂಚಾರ ಕಡಿತಗೊಂಡಿದ್ದು, ವಾಹನ ಸವಾರರು ಮಡಿಕೇರಿಯ ಮೇಕೇರಿ ರಸ್ತೆಯ ಮೂಲಕ ತೆರಳಲು ಪೊಲೀಸರು ಅವಕಾಶ ನೀಡಿದ್ದಾರೆ.ಒಂದು ವರ್ಷದ ಹಿಂದೆ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಬಳಿ ೭ ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಆದರೆ, ನಿರಂತರ ಮಳೆಯಿಂದಾಗಿ ತಡೆಗೋಡೆಗೆ ಹಾಕಿದ್ದ ಸ್ಲ್ಯಾಬ್‌ಗಳು ಬೀಳುವ ಆತಂಕ ಎದುರಾಗಿತ್ತು. ಇದರ ದುರಸ್ಥಿಗಾಗಿ ತಡೆಗೋಡೆಗೆ ರಂಧ್ರ ಕೊರೆಸಿ ಬೋಲ್ಟ್ ಅಳವಡಿಸಲು ಮುಂದಾಗಿದ್ದರು. ಆದರೆ ರಂಧ್ರ ಕೊರೆದ ಬಳಿಕ ತಡೆಗೋಡೆ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. ಅಧಿಕಾರಿಗಳ ಸಲಹೆ ಮೇರೆಗೆ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಸ್ಥಳದಲ್ಲೇ ಪೊಲೀಸ್ ಅಧಿಕಾರಿಗಳು ಹಾಗೂ ಹೆದ್ದಾರಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಅನಾಹುತಗಳು ಮಾತ್ರ ತಪ್ಪಿಲ್ಲ. ಭೂಕುಸಿತ ಸಂಭವಿಸುತ್ತಿದ್ದು, ಭೋಪಯ್ಯ ಎಂಬುವರ ಕಾಫೊ ತೋಟದಲ್ಲಿ ಅರ್ಧ ಎಕರೆಯಷ್ಟು ಆಳಕ್ಕೆ ಕುಸಿದಿದೆ. ಇದರಿಂದಾಗಿ ಕಾಫಿ, ಬಾಳೆ, ಅಡಿಕೆಗಳು ನಾಶವಾಗಿವೆ.
ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಭಾಗಮಂಡಲದಲ್ಲಿ ಕಾವೇರಿ ನೀರು ಹರಿಯುತ್ತಿದ್ದು, ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ.