ಉತ್ತರ ಕನ್ನಡ: ನೌಕಾಪಡೆ ತಂತ್ರಜ್ಞರಿಂದ ಆಕ್ಸಿಜನ್ ವ್ಯವಸ್ಥೆ ಪರಿಶೀಲನೆ

ಕಾರವಾರ, ಜೂ 5: ಉತ್ತರಕನ್ನಡ ಜಿಲ್ಲೆಯಲ್ಲಿ ಗೊತ್ತುಪಡಿಸಿದ ಕೊವಿಡ್-19 ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ವ್ಯವಸ್ಥೆಯ ಸಮರ್ಪಕ ಕಾರ್ಯನಿರ್ವಹಣೆ ಖಚಿತ ಪಡಿಸಿಕೊಳ್ಳಲು ಭಾರತೀಯ ನೌಕಾ ಪಡೆಯು ತಂತ್ರಜ್ಞರ ತಂಡಗಳನ್ನು ನಿಯೋಜನೆ ಮಾಡಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಭಾರತೀಯ ನೌಕಾ ಪಡೆ, ಜಿಲ್ಲೆಯ 12 ತಾಲೂಕುಗಳಲ್ಲಿ ಗೊತ್ತುಪಡಿಸಿದ ಕೊವಿಡ್-19 ಆಸ್ಪತ್ರೆಗಳಲ್ಲಿನ ವೈದ್ಯಕೀಯ ಆಮ್ಲಜನಕ ಯಾವುದೇ ಅಡೆತಡೆಗಳಿಲ್ಲದೇ ನಿರಂತರವಾಗಿ ಪೂರೈಕೆಯಾಗುತ್ತಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ನೌಕಾಪಡೆಯ ತಂತ್ರಜ್ಞರು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಮೇ ಆರಂಭದಿಂದ ನೌಕಾದಳದ ತಂತ್ರಜ್ಞರ ತಂಡಗಳು ಜಿಲ್ಲೆಯ 23 ಆಸ್ಪತ್ರೆಗಳಲ್ಲಿ ಆಕ್ಸಿಜನ್ ವ್ಯವಸ್ಥೆಯ ಪರಿಶೀಲನೆ ನಡೆಸಿದೆ. ಭಾರತೀಯ ನೌಕಾ ಪಡೆಯ ವಿಶೇಷ ಸಿಬ್ಬಂದಿಗಳು ಜಿಲ್ಲೆಯ ಭಟ್ಕಳ, ಯಲ್ಲಾಪುರ, ಸಿದ್ದಾಪುರ ಹಾಗೂ ಶಿರಸಿಯ ಕೊವಿಡ್ ಆಸ್ಪತ್ರೆಗಳಲ್ಲಿ ಆಮ್ಲಜನಕ ವಿತರಣಾ ವ್ಯವಸ್ಥೆಯಲ್ಲಿನ ಸೋರಿಕೆ ಸೇರಿದಂತೆ ಹಲವು ಲೋಪ ದೋಷಗಳನ್ನು ಗುರುತಿಸಿ ಸರಿಪಡಿಸಿದ್ದಾರೆ ಎಂದು ನೌಕಾದಳದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ.
ಕೊವಿಡ್ ಹೋರಾಟಕ್ಕೆ ಕೈ ಜೋಡಿಸಿರುವ ನೌಕಾದಳ:
ಕೊವಿಡ್ ವಿರುದ್ದದ ಹೋರಾಟದಲ್ಲಿ ಆಡಳಿತದೊಂದಿಗೆ ಭಾರತೀಯ ನೌಕಾ ಪಡೆ ಕೈ ಜೋಡಿಸಿದ್ದು, ಅಗತ್ಯ ನೆರವನ್ನು ಸಹ ನೀಡುತ್ತಿದೆ. ಕೊವಿಡ್ ಮೊದಲ ಹಂತದಲ್ಲಿ ಕಾರವಾರದ ಅರ್ಗಾದಲ್ಲಿರುವ ಭಾರತೀಯ ನೌಕಾಪಡೆಯ ಐಎನ್‍ಎಚ್‍ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಕೊವಿಡ್ ಸೊಂಕಿತರಿಗಾಗಿ ವಿಶೇಷ ವಾರ್ಡ್ ತೆರೆದು ಯಶಸ್ವಿ ಚಿಕಿತ್ಸೆ ನೀಡಲಾಗಿತ್ತು. ಇನ್ನು ದೇಶದಲ್ಲಿ ಆಕ್ಸಿಜನ್ ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣಗಳ ಕೊರತೆ ಉಂಟಾದಾಗ, ಮಿತ್ರ ರಾಷ್ಟ್ರಗಳಿಂದ ಅವುಗಳನ್ನು ಭಾರತೀಯ ನೌಕಾ ಪಡೆಯ ಹಡಗುಗಳ ಮೂಲಕ ತರಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.